ಕಾರ್ಪೊರೇಟ್ ಕಂಪನಿಗಳ ವಿರುದ್ಧ ಆಕ್ರೋಶ

dvg-protest.jpg
Published on

ದಾವಣಗೆರೆ  : ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ವಿದೇಶಿ ಕಾರ್ಪೊರೇಟ್ ಕಂಪನಿಗಳು ದೇಶ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ಕೇಂದ್ರೀಯ ಕಾರ್ಮಿಕ ಸಂಘಗಳ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.  ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯ ಭಾಗವಾಗಿ ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕಾರ್ಪೊರೇಟ್ ಕಂಪನಿಗಳ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಂದ ಮೆರವಣಿಗೆ ಹೊರಟು ಉಪ ವಿಭಾಗಾಧಿಕಾರಿ ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಿದರು.  ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಪ್ರಮುಖ ಚಳವಳಿ. 1942ರಲ್ಲಿ ನಡೆದ ಈ ಹೋರಾಟ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಸ್ವಾತಂತ್ರ್ಯಾ ನಂತರದಲ್ಲಿ ಕಾರ್ಪೊರೇಟ್ ಕಂಪನಿಗಳು ಜನರನ್ನು ಶೋಷಣೆ ಮಾಡುತ್ತಿವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಆ ಕಂಪನಿಗಳ ಪರವಾದ ನೀತಿ ಅನುಷ್ಠಾನಕ್ಕೆ ಬರುತ್ತಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಮುಖಂಡ ಎಚ್.ಜಿ. ಉಮೇಶ್ ಆರೋಪಿಸಿದರು.  ಕೃಷಿ ವಲಯ ಪ್ರವೇಶಕ್ಕೆ ಬಹುರಾಷ್ಟ್ರೀಯ ಕಂಪನಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇದು ದೇಶದ ರೈತರ ಮೇಲೆ ಬಹುದೊಡ್ಡ ಪರಿಣಾಮವನ್ನುಂಟು ಮಾಡಲಿದೆ. ಭಾರತದ ಉತ್ಪನ್ನಗಳಿಗೆ ಅಮೆರಿಕ ಹೆಚ್ಚು ಸುಂಕ ವಿಧಿಸುವ ಬೆದರಿಕೆ ಹಾಕುತ್ತಿದೆ. ಈ ಬೆದರಿಕೆಯನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ಎದುರಿಸಬೇಕು ಎಂದು ಒತ್ತಾಯಿಸಿದರು.  ರೈತ ಮುಖಂಡ ಹೊನ್ನೂರು ಮುನಿಯಪ್ಪ ಮಾತನಾಡಿ, ರೈತರು ಬೆಳೆದ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸಬೇಕು. ಉತ್ಪಾದನಾ ವೆಚ್ಚಕ್ಕೆ ಶೇ. 50ರಷ್ಟು ಸಹಾಯಧನ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದರು.  ಮುಖಂಡರಾದ ಸುರೇಶ್ ಯರಗುಂಟೆ, ಮಧು ತೊಗಲೇರಿ, ಇ. ಉಮೇಶ್, ಆವರಗೆರೆ ಚಂದ್ರು, ಆನಂದರಾಜ್ ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net