ಕುರಿಗಾಹಿಗಳ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

IMG-20250809-WA0060.jpg
Published on

ದಾವಣಗೆರೆ  : ಕುರಿಗಾಹಿಗಳ ಸಂರಕ್ಷಣಾ ಕಾಯ್ದೆಯನ್ನು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಿ ಜಾರಿಗೆ ತರಬೇಕೆಂದು ಒತ್ತಾಯಿಸಿ, ಆ. 19ರಂದು ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಸಿ. ವೀರಣ್ಣ ಹೇಳಿದರು.  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಿಂದ ವಿಧಾನಸೌಧದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ರಾಜ್ಯದ ಎಲ್ಲ ಕುರಿಗಾಹಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.  ಮಹಾಸಭಾದ ಜಿಲ್ಲಾ ಕಾರ್ಯಾಧ್ಯಕ್ಷ ದೀಟೂರು ಚಂದ್ರು ಮಾತನಾಡಿ, ಮಳೆ, ಗಾಳಿ, ಚಳಿ ಹಾಗೂ ಬಿಸಿಲು ಲೆಕ್ಕಿಸದೇ ಕುರಿ ಹಿಂಡುಗಳೊಂದಿಗೆ ಊರೂರು ಸುತ್ತಾಡುವ ಕುರಿಗಾಹಿಗಳು ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ದುಷ್ಕರ್ಮಿಗಳು ಕುರಿಗಳನ್ನು ಕಳವು ಮಾಡಲು ಕುರಿಗಾಹಿಗಳ ಮೇಲೆ ಹಲ್ಲೆ, ಹತ್ಯೆಯಂಥ ಪ್ರಕರಣಗಳು ನಡೆಯುತ್ತಿವೆ ಎಂದು ಉದಾಹರಣೆಗಳನ್ನು ನೀಡಿದರು.  ಹಲವು ರೀತಿಯಲ್ಲಿ ಕುರಿಗಾಹಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಬರುವ ಸಂಪುಟದಲ್ಲಿ ಈ ಕಾಯ್ದೆ ಜಾರಿಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.  ಮಹಾಸಭಾದ ಉಪಾಧ್ಯಕ್ಷ ಜಿ.ಷಣ್ಮುಖಪ್ಪ, ಕಾರ್ಯದರ್ಶಿ ಎಸ್.ಎಂ. ಸಿದ್ದಲಿಂಗಪ್ಪ, ಬಿ.ಪಿ. ಅನಿಲಕುಮಾರ್, ಅಣ್ಣಪ್ಪ ಕರಗಾರ್, ಮಲ್ಲಪ್ಪ ಬನ್ನಿ ಸುದ್ದಿಗೋಷ್ಠಿಯಲ್ಲಿದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net