ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ

dvg-strike.jpg
Published on

ದಾವಣಗೆರೆ : ಕಾರ್ಮಿಕ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಕರೆಯ ಮೇರೆಗೆ ವಿವಿಧ ಸಂಘಟನೆಗಳ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.  ಜಯದೇವ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು ಸರ್ಕಾರದ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ನಂತರ ಅಲ್ಲಿಂದ ಮೆರವಣಿಗೆ ಆರಂಭಿಸಿ ಅಂಬೇಡ್ಕರ್ ವೃತ್ತ, ಚೇತನ ಹೋಟೆಲ್, ರೇಣುಕ ಮಂದಿರ, ಮಹಾನಗರ ಪಾಲಿಕೆ, ಗಾಂಧಿ ವೃತ್ತ, ಅಶೋಕ ರಸ್ತೆ ಮೂಲಕ ಜಯದೇವ ವೃತ್ತಕ್ಕೆ ವಾಪಸಾದರು.  ನಿವೃತ್ತ ಪ್ರಾಧ್ಯಾಪಕ ಎ.ಬಿ. ರಾಮಚಂದ್ರಪ್ಪ ತಮಟೆ ಬಾರಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿ, ಕಾರ್ಮಿಕರ ಬೆವರಿನಿಂದಲೇ ಭಾರತ ಪ್ರಕಾಶಿಸುತ್ತಿದೆ. ಆದರೆ ಸರ್ಕಾರಗಳು ಈ ಬೆವರಿನ ಮಹತ್ವವನ್ನು ಅರ್ಥ ಮಾಡಿಕೊಂಡಿಲ್ಲ ಎಂದರು.  ಬಡವರ ಬೆವರು ಹೀರಿ ಬಂಡವಾಳ ಶಾಹಿಗಳಿಗೆ ಮಣೆ ಹಾಕಲಾಗುತ್ತಿದೆ. ದುಡಿಯುವ ವರ್ಗದವರನ್ನು ಸರ್ಕಾರಗಳು ಆಧುನಿಕ ಜೀತಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.  ದೇಶದ ಸಂಪತ್ತನ್ನು ಮಾರಾಟ ಮಾಡಲಾಗುತ್ತಿದೆ. ಉದ್ಯಮಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಈಗ ವಿದ್ಯುತ್ ವಲಯದ ಖಾಸಗೀಕರಣಕ್ಕೆ ಪ್ರಯತ್ನ ನಡೆದಿದೆ. ಕಾರ್ಮಿಕ ಸಂಘಟನೆಗಳನ್ನು ದುರ್ಬಲಗೊಳಿಸುವ ಹುನ್ನಾರ ಇದರ ಹಿಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.  ರಾಜ್ಯ ಸರ್ಕಾರ ಬಡವರಿಗೆ ಗ್ಯಾರಂಟಿ ಭಾಗ್ಯಗಳನ್ನು ನೀಡಿದೆ. ಇದರಿಂದ ಜನರು ಸೋಮಾರಿಗಳಾಗುತಾರೆ ಎಂದು ಕೆಲವರು ವಾದಿಸುತ್ತಾರೆ. ಅಕ್ಕಿ ಕೊಟ್ಟ ತಕ್ಷಣ ಸೋಮಾರಿಗಳಾಗುತ್ತಾರೆ ಎನ್ನುವವರು ಕಾರ್ಮಿಕ ವಿರೋಧಿಗಳು ಎಂದರು.  ದೇಶದಲ್ಲಿ ಬಹುತ್ವವನ್ನು ನಾಶ ಮಾಡುವ ಪ್ರಯತ್ನಗಳನ್ನು ತಡೆಯಬೇಕಿದೆ. ಎಲ್ಲರೂ ಸೌಹಾರ್ದದಿಂದ ಬಾಳಬೇಕು. ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಪರಿವರ್ತನೆ ಆಗಬೇಕು. ಕಾರ್ಮಿಕ ವಿರೋಧಿ ಸರ್ಕಾರಗಳನ್ನು ಕಿತ್ತೊಗೆಯಬೇಕು ಎಂದು ಹೇಳಿದರು.  ಒಂದು ಕಾಲಕ್ಕೆ ದಾವಣಗೆರೆ ಕೆಂಪು ಬಾವುಟ ಹಾರಾಡುವ, ಕ್ರಾಂತಿಕಾರಿ ನೆಲವಾಗಿತ್ತು. ಇತ್ತೀಚೆಗೆ ಕೇಸರಿ ನೆಲವಾಗಿ ಪರಿವರ್ತನೆಯಾಗಿದೆ ಎಂದು ಅಭಿಪ್ರಾಯಪಟ್ಟರು.  ಜಿಲ್ಲಾ ಬ್ಯಾಂಕ್ ನೌಕರರ ಸಂಘ, ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್, ನೆರಳು ಬೀಡಿ ಕಾರ್ಮಿಕರ ಯೂನಿಯನ್, ಜಿಲ್ಲಾ  ಔಷಧ ಮಾರಾಟಗಾರರ ಸಂಘ, ಸಿಐಟಿಯು, ದಾವಣಗೆರೆ ವಿವಿ ಸಿ ಮತ್ತು ಡಿ ಹೊರಗುತ್ತಿಗೆ ನೌಕರರ ಸಂಘ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಫೆಡರೇಷನ್, ಜಿಲ್ಲಾ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಎಐಕೆಕೆಎಂಎಸ್, ಆಶಾ ಕಾರ್ಯಕರ್ತೆಯರು, ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಹೊರಗುತ್ತಿಗೆ ನೌಕರರ ಸಂಘ ಮುಂತಾದ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸಿದ್ದವು.  ವಿವಿಧ ಸಂಘಟನೆಗಳ ಮುಖಂಡರಾದ ಆವರಗೆರೆ ಉಮೇಶ್, ರಾಘವೇಂದ್ರ ನಾಯರಿ, ಮಂಜುನಾಥ ಕೈದಾಳೆ, ಆನಂದರಾಜ್, ಜಬೀನಾ ಖಾನಂ, ಭಾರತಿ, ಎಸ್.ಎಸ್. ಮಲ್ಲಮ್ಮ, ವಿ. ಲಕ್ಷ್ಮಣ, ಸುರೇಶ ಯರಗುಂಟೆ, ಐರಣಿ ಚಂದ್ರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net