ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಆಕ್ರೋಶ

dvg-road_20250625231521124.jpg
Published on

ದಾವಣಗೆರೆ  : ಭದ್ರಾ ಬಲದಂಡೆ ನಾಲೆಯನ್ನು ಸೀಳಿ ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸುವ ಕಾಮಗಾರಿ ವಿರೋಧಿಸಿ ಅಚ್ಚುಕಟ್ಟು ಭಾಗದ ರೈತರು ನಗರ ಹೊರ ವಲಯದ ಬಾಡಾ ಕ್ರಾಸ್ ಬಳಿ ಬುಧವಾರ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.  ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು ಅವರನ್ನು ಡಿಎಆರ್ ಮೈದಾನಕ್ಕೆ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದರು.  ಬೆಳಗ್ಗೆ ವಿವಿಧ ತಾಲೂಕುಗಳಿಂದ ಬಂದಿದ್ದ ರೈತರು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ ಸೇರಿದಂತೆ ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕ್ಯಾನ್ಸರ್ ಆಸ್ಪತ್ರೆ ಬಳಿಯಿಂದ ಮೆರವಣಿಗೆ ಹೊರಟರು. ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಡ್ಡ ಇಟ್ಟು ತಡೆಯಲು ಪ್ರಯತ್ನಿಸಿದರು. ಆದರೂ ಪ್ರತಿಭಟನಾಕಾರರು ಮುನ್ನುಗ್ಗಿದರು.  ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಅಲ್ಲಲ್ಲಿ ತಡೆಯಲು ನಡೆಸಿದ ಪ್ರಯತ್ನ ವಿಫಲವಾಯಿತು. ಹೆಚ್ಚುವರಿ ಎಸ್ಪಿ ಜಿ. ಮಂಜುನಾಥ್, ನಗರ ಡಿವೈಎಸ್ಪಿ ಶರಣ ಬಸವೇಶ್ವರ ಇನ್ನಿತರ ಹಿರಿಯ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಬೇಕೇ ಬೇಕು, ನ್ಯಾಯ ಬೇಕು ಎನ್ನುತ್ತ ಪ್ರತಿಭಟನಾಕಾರರು ಮುಂದೆ ಸಾಗಿದರು.  ಅಪೂರ್ವಾ ರೆಸಾರ್ಟ್ ಬಳಿ ಹೆದ್ದಾರಿ ತಡೆ ಮಾಡಲು ಆರಂಭಿಸುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿ ಡಿಎಆರ್ ಮೈದಾನಕ್ಕೆ ಕರೆದೊಯ್ದರು. ಈ ವೇಳೆ ರೇಣುಕಾಚಾರ್ಯ ರೈತರನ್ನು ಉದ್ದೇಶಿಸಿ ಮಾತನಾಡಿ, ಹೇಡಿ ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಬಲವಂತವಾಗಿ ನಮ್ಮನ್ನು ಬಂಧಿಸಿದೆ ಎಂದರು.  ಇದರಿಂದ ರೈತರು ಧೃತಿಗೆಡಬೇಕಿಲ್ಲ. ನಾವು ನಿಮ್ಮ ಜತೆಗಿದ್ದೇವೆ ಎಂದು ಅಭಯ ನೀಡಿದರು. ಬೇರೆ ಜಿಲ್ಲೆಗೆ ಕುಡಿಯುವ ನೀರು ಒದಗಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಬಲದಂಡೆ ನಾಲೆಯನ್ನು ಸೀಳಿ, ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.  ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆಯನ್ನು ಸರ್ಕಾರದ ಮುಂದೆ ಇಡುವುದಕ್ಕೂ ಪೊಲೀಸರು ನಮಗೆ ಅವಕಾಶ ನೀಡಲಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಹೆದ್ದಾರಿ ತಡೆ ಮಾಡಿದ್ದರಿಂದ ಸಂಚಾರ ವ್ಯವಸ್ಥೆಗೆ ವ್ಯತ್ಯಯ ಉಂಟಾಯಿತು. ವಾಹನಗಳು ಸಾಲುಗಟ್ಟಿ ನಿಂತಿದ್ದವು.  ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ, ಮಾಡಾಳು ಮಲ್ಲಿಕಾರ್ಜುನ, ಅಜಯ ಕುಮಾರ್, ಚಂದ್ರಶೇಖರ ಪೂಜಾರ್, ಬಿ.ಎಂ. ಸತೀಶ್, ಧನಂಜಯ ಕಡ್ಲೇಬಾಳ್, ಬೆಳ್ಳೂಡಿ ಮಂಜುನಾಥ್, ರೈತ ಮುಖಂಡ ಬೆಳವನೂರು ನಾಗರಾಜಪ್ಪ ಇನ್ನಿತರ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net