ರಾಷ್ಟ್ರಪತಿ ಆಡಳಿತ ಜಾರಿಗೆ ಆಗ್ರಹ

manavi.jpg
Published on

ದಾವಣಗೆರೆ : ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಮುಖ್ಯಮಂತ್ರಿ ಬೀರೇನ್ ಸಿಂಗ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟಪತಿ ಆಡಳಿತ ಜಾರಿಗೊಳಿಸಲು ಒತ್ತಾಯಿಸಿ ಡಿಎಸ್‌ಎಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
 ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
 ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಮಾತನಾಡಿ, ಜನಾಂಗೀಯ ಸಂಘರ್ಷ ಮತ್ತು ಹಿಂಸಾಚಾರದಿಂದ ಮಣಿಪುರ ನಲುಗಿ ಹೋಗಿದೆ. ಕುಕಿ ಜೋ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲುಗೊಳಿಸಿದ ಗುಂಪೊಂದು ವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದು ಮಣಿಪುರ ಹಿಂಸಾಚಾರದ ಆಘಾತಕಾರಿ ಹಾಗೂ ಕರಾಳ ಮುಖವನ್ನು ದೇಶಕ್ಕೆ ತೋರಿಸಿದೆ ಎಂದು ಘಟನೆಯನ್ನು ತೀವ್ರವಾಗಿ ಖಂಡಿಸಿದರು.
 ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ ಮಣಿಪುರ ಘಟನೆಯ ಪೂರ್ಣ ಹೊಣೆಗಾರಿಕೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ಹೊತ್ತುಕೊಳ್ಳಬೇಕು. ಮಹಿಳೆಯರನ್ನು ಸಂಪೂರ್ಣ ಬೆತ್ತಲುಗೊಳಿಸಿ ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಾಚಾರ ಎಸಗಿರುವ ದುಷ್ಕರ್ಮಿಗಳನ್ನು  ತಕ್ಷಣವೇ ಗಲ್ಲು ಶಿಕ್ಷೆಗೊಳಪಡಿಸಬೇಕು. ಮಣಿಪುರ ಸಿಎಂ ಬೀರೇನ್ ಸಿಂಗ್ ನೇತೃತ್ವದ ಸರ್ಕಾರವನ್ನು ಕೂಡಲೇ ವಜಾಗೊಳಿಸಿ ರಾಷ್ಟಪತಿ ಆಡಳಿತ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
 ವಿಜಯಲಕ್ಷ್ಮಿ, ಹನುಮಂತಪ್ಪ ಅಣಜಿ, ಪ್ರದೀಪ್, ಮಹಾಂತೇಶ್ ಹಾಲುವರ್ತಿ, ಮಂಜುನಾಥ್, ಹನುಮಂತಪ್ಪ, ಖಾಲಿದ್ ಅಲಿ,ಮಹಾಂತೇಶ್ ಬೇತೂರು, ನಾಗರಾಜ್ ಬಿ. ಚಿತ್ತಾನಹಳ್ಳಿ, ಬೇತೂರು ಹನುಮಂತ, ಮಂಜುನಾಥ್ ನೀರ್ಥಡಿ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net