

ದಾವಣಗೆರೆ : ಪ್ರೋತ್ಸಾಹಧನ ಸೇರಿಸಿ ಏ. 1ರಿಂದ ಅನ್ವಯವಾಗುವಂತೆ ಗೌರವ ಧನವನ್ನು 10 ಸಾವಿರ ರೂ. ನೀಡುವ ಕುರಿತು ಆದೇಶ ಹೊರಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಎಐಯುಟಿಯುಸಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಆಯವ್ಯಯದಲ್ಲಿ ರಾಜ್ಯದ 2.50 ಲಕ್ಷ ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಹೆಚ್ಚಿಸಿದಂತೆ 42 ಸಾವಿರ ಆಶಾ ಕಾರ್ಯಕರ್ತೆಯರಿಗೂ 1 ಸಾವಿರ ರೂ. ಜಾಸ್ತಿ ಮಾಡಿ, ಇದೇ ಬಜೆಟ್‌ನಲ್ಲಿ ಸೇರಿಸಿ ಆದೇಶಿಸಬೇಕು ಎಂದು ಒತ್ತಾಯಿಸಿದರು. ಕೂಡಲೇ ಆರೋಗ್ಯ ಸಚಿವರ ಸಮ್ಮುಖದಲ್ಲಿ ಇಲಾಖೆಯಿಂದ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ಮಾಡಿ, ಸುಗಮಕಾರರನ್ನು ಮತ್ತು 60 ವರ್ಷವಾದ ಆಶಾ ಕಾರ್ಯಕರ್ತೆಯರ ಕೆಲಸವನ್ನು ಕೊನೆಗಾಣಿಸಿರುವುದನ್ನು ಹಿಂತೆಗೆದುಕೊಂಡು ಇನ್ನುಳಿದ ಬಹು ದಿನಗಳ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜ. 7 ರಿಂದ 10ರ ವರೆಗೆ ಆಶಾ ಕಾರ್ಯಕರ್ತೆಯರ ರಾಜ್ಯಮಟ್ಟದ ಅನಿರ್ದಿಷ್ಟ ಹೋರಾಟ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದಿತ್ತು. ಜ. 10 ರಂದು ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ, ಸಂಘದ ಪದಾಧಿಕಾರಿಗಳನ್ನು ಕರೆದು ಸಿಎಂ ಸಭೆ ಮಾಡಿದ್ದರು. ಅಲ್ಲಿ ಹಲವು ನಿರ್ಧಾರಗಳನ್ನು ಸರ್ಕಾರ ಪ್ರಕಟಿಸಿತ್ತು. ಇಲ್ಲಿಯವರಗೆ ಈ ಕುರಿತು ಸ್ಪಷ್ಟ ಆದೇಶ ಹೊರಬಿದ್ದಿಲ್ಲ. ಬಜೆಟ್ ಪೂರ್ವಭಾವಿ ಸಭೆಗೆ ಕರೆಯಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ್ ಕುಕ್ಕುವಾಡ, ಜಿಲ್ಲಾಧ್ಯಕ್ಷೆ ಲಲಿತಮ್ಮ, ಜಿಲ್ಲಾ ಕಾರ್ಯದರ್ಶಿ ನಾಗವೇಣಿ, ಹಾಲಮ್ಮ ಹೊನ್ನೂರು, ಪರ್ವೀನ್ ಬಾನು, ರೂಪಾ ಕೊಂಡದ ಹಳ್ಳಿ, ಮಂಜಮ್ಮ, ಲೀಲಾವತಿ, ತಿಪ್ಪಮ್ಮ, ಎಸ್.ಆರ್. ಇಂದಿರಾ, ರೇಖಾ ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ ಭಾಗವಹಿಸಿದ್ದರು.