

ದಾವಣಗೆರೆ : ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಭವನದ ಬಳಿ ಸೇರಿದ ಗ್ರಾಮಸ್ಥರು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆರುಂಡಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ನಿಯಮ ಬಾಹಿರವಾಗಿ ನಡೆಸುತ್ತಿರುವ ಕಲ್ಲು ಕ್ವಾರಿಗಳನ್ನು ಸ್ಥಗಿತಗೊಳಿಸಬೇಕು ಎಂದು ಈ ಹಿಂದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳನ್ನು ನಡೆಸುತ್ತಿರುವುದರಿಂದ ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ. ಹಾನಿಯೂ ಸಂಭವಿಸಿದೆ. ಮನೆಗಳು ಬಿರುಕು ಬಿಟ್ಟಿವೆ. ಅಂತರ್ಜಲ ಮಟ್ಟ ಕುಸಿತಗೊಂಡಿದೆ. ವಾಯು ಮಾಲಿನ್ಯದಿಂದಾಗಿ ರೋಗ ರುಜಿನಗಳು ಹರಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಪಶು ಸಂಗೋಪನೆಗೂ ಕಂಟಕ ಎದುರಾಗಿದೆ. ಹಲವು ಸಮಸ್ಯೆಗಳಿದ್ದರೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳನ್ನು ನಡೆಸಲಾಗುತ್ತಿದೆ. ಜನರ ಆರೋಗ್ಯ ಮತ್ತು ಪರಿಸರ ದೃಷ್ಟಿಯಿಂದ ಕೂಡಲೇ ಸ್ಥಗಿತಗೊಳಿಸಬೇಕು. ಮತ್ತೆ ಯಾವುದೇ ಕಾರಣಕ್ಕೂ ತಲೆ ಎತ್ತಲು ಬಿಡಬಾರದು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಈ ವೇಳೆ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಮಾತನಾಡಿ, ಗ್ರಾಮದ ಜನರಿಗೆ ತೊಂದರೆಯಾಗುತ್ತಿದ್ದರೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿರುವುದು ಆಶ್ಚರ್ಯ ತಂದಿದೆ. ವಾಯು ಮಾಲಿನ್ಯ ಉಂಟಾಗಿದೆ. ಮನೆಯಲ್ಲಿ ಬಿರುಕು ಬಿಟ್ಟಿದ್ದು, ಜನರು ಆತಂಕದಲ್ಲಿಯೇ ವಾಸ ಮಾಡುತ್ತಿದ್ದಾರೆ. ಅನಧಿಕೃತವಾಗಿ ನಡೆಸುತ್ತಿರುವ ಗಣಿಗಾರಿಕೆ ನಿಲ್ಲಿಸಬೇಕು. ಕ್ರಷರ್‌ಗಳ ಕಾರ್ಯಾಚರಣೆಯೂ ಸ್ಥಗಿತವಾಗಬೇಕು. ಇದು ಗ್ರಾಮ ಮತ್ತು ಜನರ ಉಳಿವಿನ ಹೋರಾಟವಾಗಿದೆ. ಆರುಂಡಿ ಗ್ರಾಮಸ್ಥರ ಹೋರಾಟಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಹೇಳಿದರು. ಆರುಂಡಿ ಗ್ರಾಮದ ಹಿರಿಯ ಮುಖಂಡರಾದ ಸಿ. ಚಂದ್ರಪ್ಪ, ಶಿವಪ್ಪ, ಸತೀಶಪ್ಪ, ಬಿ.ಆರ್. ಪ್ರಕಾಶ್, ಶ್ರೀನಿವಾಸ್, ರಾಮಚಂದ್ರಪ್ಪ, ವೀರೇಶ್, ಮೂರ್ತೆಪ್ಪ, ಬೀರಪ್ಪ, ನರಸಿಂಹಪ್ಪ, ಸುರೇಶ್, ಕುಮಾರಪ್ಪ, ಹಾಲೇಶಪ್ಪ, ತಿಮ್ಮಣ್ಣ, ತಿಮ್ಮಜ್ಜರ ಶ್ರೀನಿವಾಸ್, ಜವಳಿ ಪ್ರಕಾಶ್ ಇದ್ದರು.