ಸಂಘಟನೆಯಿಂದ ಸಮಸ್ಯೆಗಳ ಪರಿಹಾರ

dvg-principals-meeting.jpg
Published on

ದಾವಣಗೆರೆ : ಸಂಘಟಿತರಾಗುವ ಮೂಲಕ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಕರ್ನಾಟಕ ರಾಜ್ಯ ಕ್ರೈಸ್ ಪ್ರಾಂಶುಪಾಲರ ಸಂಘದ ಗೌರವಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಡಾ.ಸಿ.ಎಂ. ಸತೀಶ್ ಹೇಳಿದರು.  ನಗರದ ಗುರುಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಕ್ರೈಸ್ ಪ್ರಾಂಶುಪಾಲರ ಸಂಘದ ರಾಜ್ಯಮಟ್ಟದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, 2001ರಿಂದ ಪ್ರಾಚಾರ್ಯರಾಗಿ ಸೇವೆ ಮಾಡುತ್ತಿದ್ದೇವೆ. ಇದುವರೆಗೂ ಸರ್ಕಾರ ನಮಗೆ ಪದೋನ್ನತಿ ನೀಡುತ್ತಿಲ್ಲ. ಕೆಲವರು 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿದ್ದಾರೆ. ಇಷ್ಟು ವರ್ಷ ಸೇವೆ ಸಲ್ಲಿಸಿ ಪದೋನ್ನತಿ ಆಗದಿದ್ದರೆ ಪ್ರಯೋಜನವೇನು ಎಂದು ಪ್ರಶ್ನಿಸಿದರು.  ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಕಾರಣಗಳಿಗೆ ಪ್ರಾಚಾರ್ಯರಿಗೆ ಅಮಾನತಿನ ಶಿಕ್ಷೆ ನೀಡಲಾಗುತ್ತಿದೆ. ವಿಜಯಪುರ ಜಿಲ್ಲೆಯ ಶಾಲೆಯೊಂದರಲ್ಲಿ ಗೇಟ್ ತೆಗೆದಿದೆ ಎಂಬ ಕಾರಣಕ್ಕೆ ಪ್ರಾಚಾರ್ಯರನ್ನು ಅಮಾನತು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.  ಯಾರೋ ಒಬ್ಬರು ಪ್ರಾಚಾರ್ಯರು ಸರಿ ಇಲ್ಲ ಎಂದು ಮೂಕ ಅರ್ಜಿ ಬರೆದರೆ, ಅದನ್ನು ಪರಾಮರ್ಶಿಸದೆ ಮೇಲಧಿಕಾರಿಗಳು ಶಿಸ್ತಿನ ಕ್ರಮ ಜರುಗಿಸಿ ಅಮಾನತಿನ ಶಿಕ್ಷೆ ನೀಡಲಾಗುತ್ತಿದೆ. ನಿಜವಾದ, ಬಲವಾದ ತಪ್ಪುಗಳು ಇಲ್ಲದಿದ್ದರೂ ಶಿಸ್ತು ಕ್ರಮ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಸಂಘ ಏಕೆ ಖಂಡಿಸುವುದಿಲ್ಲ. ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸಂಘಟನೆ ಏಕೆ ಬೇಕು ಎಂದು ಪ್ರಶ್ನಿಸಿದರು.  ಪ್ರತಿ ವರ್ಷ ಸರ್ವ ಸದಸ್ಯರ ಸಭೆ ಕರೆದರೆ ಏನು ಪ್ರಯೋಜನ?. ಈ ಸಭೆಯಿಂದ ಏನಾದರೂ ಪರಿಹಾರ ಸಿಗಬೇಕಲ್ಲ. ಬನ್ನಿ ಹೋರಾಟ ಮಾಡೋಣ ಎಂದರೆ ಯಾರೂ ಬರುವುದಿಲ್ಲ. ಶಿಕ್ಷಕರು ಪತ್ರ ಬರೆದರೆ ಶಿಸ್ತು ಕ್ರಮ ಆಗುತ್ತದೆ. ನಾವು ಪತ್ರ ಬರೆದರೆ ಯಾವ ಕ್ರಮವೂ ಇಲ್ಲ. ಹೀಗಾಗಿ ನಾವು ಸಂಘಟಿತರಾಗದಿದ್ದರೆ ಮುಂದಿನ ದಿನಗಳಲ್ಲಿ ಬೆಲೆ ಸಿಗುವುದಿಲ್ಲ ಎಂದು ಎಚ್ಚರಿಸಿದರು.  ಶಾಲೆಗಳಲ್ಲಿನ ನೂರಾರು ಸಮಸ್ಯೆಗಳು, ನಿರಂತರ ಒತ್ತಡದಿಂದ ಕೆಲವು ಪ್ರಾಚಾರ್ಯರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಬಂದಿದೆ. ಇದೇ ರೀತಿ ಒತ್ತಡ ಹೆಚ್ಚಾದರೆ ಇನ್ನೂ ಬೇರೆ ಕಾಯಿಲೆಗಳು ಬರಬಹುದು. ಮೇಲಧಿಕಾರಿಗಳು ನಮ್ಮ ಸಮಸ್ಯೆ ಕೇಳುತ್ತಿಲ್ಲ ಎಂದರು.  ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಹೇಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಾಧ್ಯಕ್ಷ ಜಗದೀಶ ಕಣಕಾಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಶರಣಪ್ಪ ಬಿರಾದಾರ, ನವೀದ್ ಅಂಜುಮ್, ಕೆ.ಎಸ್. ಮಾರಾಪೂರ, ಶರಣು ಮಾಗಶೆಟ್ಟಿ, ಎಚ್.ಎನ್. ಪ್ರಸನ್ನಕುಮಾರ್, ಜಂಟಿ ಕಾರ್ಯದರ್ಶಿ ಕೆ.ಎಂ. ಪ್ರಸನ್ನ ಕುಮಾರ್, ಸಹ ಕಾರ್ಯದರ್ಶಿಗಳಾದ ಜಿ. ಭಾಸ್ಕರ್ ಬಾಬು, ಅರವಿಂದ ಹೂಗಾರ, ಬಿ.ಎಚ್. ಪ್ರಕಾಶ್, ಖಜಾಂಚಿ ವಿ.ಲೀಲಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಪ್ಪ ಸಕ್ರಿ, ಗುರುಪಾದಗೌಡ ಸೂಡಿ, ಜಿ.ಎನ್. ರೂಪಕಲಾ, ಎ.ಎನ್. ಪ್ರಸವಿ ಸೇರಿ ರಾಜ್ಯದಿಂದ ಆಗಮಿಸಿದ್ದ ವಸತಿ ಶಾಲೆಗಳ ಪ್ರಾಚಾರ್ಯರು ಪಾಲ್ಗೊಂಡಿದ್ದರು.  ...  

ಪ್ರಮುಖ ಬೇಡಿಕೆಗಳು

 * ಪ್ರಾಚಾರ್ಯರಿಗೆ ಪದೋನ್ನತಿ ನೀಡಬೇಕು  * ಮೇಲ್ದರ್ಜೆಗೇರಿಸಿದ ವಸತಿ ಕಾಲೇಜುಗಳಿಗೆ ಕೇವಲ ಬಿ ವೃಂದದ ಪ್ರಾಚಾರ್ಯರನ್ನು ಪರಿಗಣಿಸಬೇಕು  * ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿಗೆ ಕೇವಲ ಮಹಿಳಾ ಪ್ರಾಚಾರ್ಯರನ್ನು ನೇಮಿಸಬಾರದು  * ಸಣ್ಣ ಸಣ್ಣ ಕಾರಣಗಳಿಗೆ ಅಮಾನತು ಮಾಡುವುದನ್ನು ನಿಲ್ಲಿಸಬೇಕು  * 2017-18ನೇ ಸಾಲಿನಲ್ಲಿ ಆರಂಭವಾದ ಶಾಲೆಗಳಿಗೆ 7 ಜನ ಹೊರ ಸಂಪನ್ಮೂಲ ಸಿಬ್ಬಂದಿಯ ಸಂಖ್ಯೆಯನ್ನು 11ಕ್ಕೆ ಹೆಚ್ಚಿಸಬೇಕು  * ಶಾಲಾ ನಿರ್ವಹಣೆಯ ಅನುದಾನವನ್ನು ಜಾಸ್ತಿ ಮಾಡಬೇಕು  * ಆಹಾರಕ್ಕೆ ಹೆಚ್ಚಿಸಲಾದ 100 ರೂ. ಶಾಲೆಗಳಿಗೆ ನೇರವಾಗಿ ಬಿಡುಗಡೆ ಆಗಬೇಕು  * ವಸತಿ ನಿರ್ದೇಶನಾಲಯವನ್ನು ಮಾಡಬೇಕು  * ನಿವೃತ್ತರಾದ ನೌಕರರಿಗೆ ಗುಂಪು ವಿಮೆ ನೀಡಬೇಕು  * ನೌಕರರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ಒದಗಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net