

ದಾವಣಗೆರೆ : ಜಿಲ್ಲಾ ವರದಿಗಾರರ ಕೂಟದ ಸ್ವಂತ ಜಾಗ, ಕಟ್ಟಡ ಹೊಂದಬೇಕೆಂಬ 18 ವರ್ಷದ ನಿರೀಕ್ಷೆ, ಕನಸನ್ನು ಆದಷ್ಟು ಬೇಗನೆ ಸಾಕಾರಗೊಳಿಸಲು ಪ್ರಯತ್ನಿಸುವುದಾಗಿ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಭರವಸೆ ನೀಡಿದರು. ಜಿಲ್ಲಾ ವರದಿಗಾರರ ಕೂಟದಲ್ಲಿ ಶುಕ್ರವಾರ, 8ನೇ ವರ್ಷದ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ರಾಜ್ಯದ ಬಹುತೇಕ ಕಡೆ ಪತ್ರಿಕಾ ಭವನ ಇದ್ದರೂ, ದಾವಣಗೆರೆಯಂತಹ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಪತ್ರಿಕಾ ಭವನ ಇಲ್ಲವೆಂಬ ಕೊರಗು ಶೀಘ್ರವೇ ನೀಗಲಿದೆ ಎಂದರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹಾಗೂ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಕೂಟದಿಂದ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಅನೇಕ ಜಾಗಗಳ ಪರಿಶೀಲನೆ ಮಾಡಿದ್ದೇವೆ. ಆದಷ್ಟು ಬೇಗನೆ ಜಾಗ ಅಂತಿಮಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಮಾತನಾಡಿ, ವರದಿಗಾರರ ಕೂಟ 18 ವರ್ಷದಿಂದ ಬಾಡಿಗೆ ಕಟ್ಟಡದಲ್ಲೇ ಇದೆ. ಸ್ವಂತ ನಿವೇಶನದ ಅಗತ್ಯವಿದೆ. ಈಗಾಗಲೇ ಶಾಸಕರು, ಸಚಿವರು, ಸಂಸದರು, ಜಿಲ್ಲಾಧಿಕಾರಿ ಹಾಗೂ ಪಾಲಿಕೆಗೆ ಮನವಿ ಮಾಡಲಾಗಿದೆ. ಮುಂದಿನ ವರ್ಷದ ಗೌರಿ ಗಣೇಶ ಹಬ್ಬವನ್ನು ಸ್ವಂತ ಕಟ್ಟಡದಲ್ಲಿ ಆಚರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರವಿರಲಿ ಎಂದು ಮನವಿ ಮಾಡಿದರು.