

ದಾವಣಗೆರೆ : ಮಹಾನಗರ ಪಾಲಿಕೆ ಹಿಂಭಾಗದ ಕೆಂಪು ಕಟ್ಟಡವನ್ನು ಜಿಲ್ಲಾ ವರದಿಗಾರರ ಕೂಟಕ್ಕೆ ನೀಡುವಂತೆ ಕೂಟದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಕೇಂದ್ರದಲ್ಲಿ ವರದಿಗಾರರ ಕೂಟಕ್ಕೆ ವಿಶಾಲ ಕಟ್ಟಡದ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಇದೇ ವೇಳೆ ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ್, ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಮಾತನಾಡಿ, ನೂತನ ಜಿಲ್ಲೆ ರಚನೆಯಾಗಿ ಎರಡೂವರೆ ದಶಕ ಕಳೆದಿದೆ. 2007ರಲ್ಲಿ ಸ್ಥಾಪನೆಯಾದಾಗಿನಿಂದಲೂ ಕೂಟವು ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಪಾಲಿಕೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ಸಂಘಟನೆಗಳು, ಬಡವರು, ರೈ ತರು ಹೀಗೆ ಎಲ್ಲರಿಗೂ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರದ ಮಧ್ಯ ಭಾಗದಲ್ಲಿ ಕೂಟಕ್ಕೆ ಜಾಗ ಅಥವಾ ಕಟ್ಟಡಕ್ಕಾಗಿ ನಿರಂತರ ಪ್ರಯತ್ನ ನಡೆಯುತ್ತಲೇ ಇದೆ ಎಂದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳ ಕೊಡುಗೆ ಸಮಾಜಕ್ಕೆ ಬಹಳ ಇದೆ. ದಾವಣಗೆರೆಯಲ್ಲೂ ಮಾದರಿ ಪ್ರೆಸ್‌ಕ್ಲಬ್ ಮಾಡಬೇಕೆಂಬ ಆಲೋಚನೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇದೆ. ಪಾಲಿಕೆ ಹಿಂಭಾಗದ ಕಟ್ಟಡವನ್ನು ದುರಸ್ತಿಪಡಿಸಿ, ಪೇಂಟಿಂಗ್ ಮಾಡಿಸಿ, ವರದಿಗಾರರ ಕೂಟಕ್ಕೆ ನೀಡುವ ಬಗ್ಗೆ ಪ್ರಾದೇಶಿಕ ಆಯುಕ್ತರ ಜತೆಗೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಕೂಟದ ಖಜಾಂಚಿ ಇ. ಪವನ ಕುಮಾರ, ಪಿಆರ್‌ಒ ಪಿ.ಎಸ್. ಲೋಕೇಶ, ಕಾರ್ಯದರ್ಶಿಗಳಾದ ಬಿ. ಸಿಕಂದರ್, ಕೆ.ಎಸ್. ಚನ್ನಬಸಪ್ಪ(ಶಂಭು), ಸಂಘಟನಾ ಕಾರ್ಯದರ್ಶಿ ಆರ್. ರವಿಬಾಬು, ಐ. ಗುರುಶಾಂತಪ್ಪ, ಆರ್.ಎಸ್.ತಿಪ್ಪೇಸ್ವಾಮಿ, ಬಿ.ಜಿ.ಮಹಾದೇವ, ಎಚ್.ಟಿ.ರಮೇಶ, ಎನ್.ನಿಂಗರಾಜು, ವಸಂತಕುಮಾರ ಇದ್ದರು.