ಸಜ್ಜನರನ್ನು ಉದ್ಧರಿಸಿದ ಗುರುರಾಯರು

dvg-krishnachar-Mannur_20240815000725232.jpg
Published on

ದಾವಣಗೆರೆ :  ಪ್ರಾತಃ ಸಂಕಲ್ಪ ಗದ್ಯವನ್ನು ರಚಿಸುವ ಮೂಲಕ ಗುರುರಾಯರು ಎಲ್ಲ ಸಜ್ಜನರನ್ನು ಉದ್ದರಿಸಿದ್ದಾರೆ. ಆ ಮೂಲಕ ಭಗವಂತನನ್ನು ಹೇಗೆ ಕಾಣಬೇಕು ಎಂದು ಮನದಟ್ಟು ಮಾಡಿಕೊಟ್ಟಿದ್ದಾರೆ ಎಂದು ಪಂಡಿತ ಕೃಷ್ಣಾಚಾರ್ಯ ಮಣ್ಣೂರು ಹೇಳಿದರು.  ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯಕ್ತ ನಗರದ ಪಿ.ಜೆ.ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ‘ಪ್ರಾತಃ ಸಂಕಲ್ಪ ಗದ್ಯ’ದ ಪಾರಾಯಣ ಪೂರ್ವಕ ಪ್ರವಚನ ಕಾರ್ಯಕ್ರಮದ 5ನೇ ದಿನವಾದ ಬುಧವಾರ ಮಾತನಾಡಿದರು.  ರಾಯರನ್ನು ನಾವು ಜ್ಞಾನದ ದೃಷ್ಟಿಯಲ್ಲಿ ನೋಡಿದಾಗ ಅವರಲ್ಲಿ ಇನ್ನೂ ಹೆಚ್ಚು ಭಕ್ತಿ ಮೂಡುತ್ತದೆ. ಇದರಿಂದ ನಮ್ಮನ್ನು ದೇವರ ಮುಂದೆ ನಿಲ್ಲಿಸಿ, ಇವನನ್ನು ಉದ್ದರಿಸು ಎಂದು ಪ್ರಾರ್ಥಿಸಿ ನಮಗೆ ಮೋಕ್ಷವನ್ನು ಕೊಡಿಸುತ್ತಾರೆ ಎಂದರು.  ಸಂಸಾರದಲ್ಲಿ ಬೇಕಾದಷ್ಟು ಸುಖವಾಗಿದ್ದೇವೆ. ಇಲ್ಲಿ ನಮಗೆ ಎಲ್ಲ ತರಹದ ಸುಖವಿದೆ. ನಾವು ಮೋಕ್ಷವನ್ನು ಯಾಕೆ ಹೊಂದಬೇಕು ಎಂದರೆ, ಸಂಸಾರದಲ್ಲಿ ಇರುವ ಸುಖ ಅತ್ಯಂತ ಕ್ಷಣಿಕ ಎಂದು ನಮಗೆ ಅನೇಕ ದಾಸವರೇಹಣ್ಯರು, ಯತಿವರೇಣ್ಯರು ತಿಳಿಸಿದ್ದಾರೆ.  ನೀರ ಮೇಲಿನ ಗುಳ್ಳೆಯಂತೆ ಸ್ಥಿರವಲ್ಲದ ಈ ಸಂಸಾರದಲ್ಲಿ ಹೆಚ್ಚು ಸುಖ ಇಲ್ಲ. ನಿಜವಾದ, ಶಾಶ್ವತವಾದ ಎಲ್ಲ ತರಹದ ಸುಖ ಹೊಂದಿದ ಲೋಕ ಅದು ಮೋಕ್ಷ. ಇದರಲ್ಲಿ ಕೇವಲ ಮನಸ್ಸಂಕಲ್ಪದಿಂದಲೇ ಎಲ್ಲವು ಸಿದ್ಧಿಸುತ್ತದೆ ಎಂದು ತಿಳಿಸಿದರು.  ಯಾವಾಗಲೂ ಸುಖಮಯ, ದುಃಖದ ಲವಲೇಶವು ಇಲ್ಲದಿರುವ ಮೋಕ್ಷವನ್ನು ಕೊಡಿಸುವ ವ್ಯಕ್ತಿಗಳೇ ಗುರುಗಳು. ಆ ಮೋಕ್ಷದ ಸುಖ ನಮಗೆ ಬೇಕು ಎಂದಾದರೆ ಗುರುಗಳಿಂದ ರಚಿತವಾದ ಈ ತತ್ವೋಪದೇಶ ಗ್ರಂಥಗಳನ್ನು ಕೇಳಬೇಕು ಹಾಗೂ  ಮನನ ಮಾಡಬೇಕು ಎಂದು ಹೇಳಿದರು.  ವಾಯುದೇವರು ದೇವರನ್ನು ಎಲ್ಲ ಕಡೆಗೆ ಯಾವಾಗಲೂ ಚಿಂತಿಸುತ್ತ, ಧ್ಯಾನಿಸುತ್ತ ಇರುವವರು, ಕೇವಲ ಚೇತನರಲ್ಲಿ ಅಲ್ಲದೆ ಜಡ ಪದಾರ್ಥಗಳಲ್ಲಿ ಭಗವಂತನನ್ನು ಕಾಣುವ ದೊಡ್ಡ ಜ್ಞಾನದ ಮಟ್ಟ ವಾಯುದೇವರದ್ದು. ಅವರು ಮನಸ್ಸಿನ ದೋಷಗಳಾದ ಅಭಿಮಾನಾದಿಗಳನ್ನು ತೊರೆದವರು. ಅಸೂಯೆ, ಈರ್ಷಾ ಮೊದಲಾದ ದೋಷಗಳಿಲ್ಲದವರು. ತಮ್ಮ ಮನಸ್ಸನ್ನು ಯಾವಾಗಲೂ ಭಗವಂತನ ಚಿಂತನೆಯಲ್ಲಿಯೇ ಇಟ್ಟವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net