

ದಾವಣಗೆರೆ : ವಾಯುದೇವರನ್ನು ಭಜಿಸುವುದರಿಂದ ನಮಗೆ ಸುಖ, ಶಾಂತಿ, ನೆಮ್ಮದಿ ಎಲ್ಲವೂ ಎಂಬುದಾಗಿ ಸಾರಿದ ಗುರುಗಳೇ ಮಂತ್ರಾಲಯ ಪ್ರಭುಗಳು ಎಂದು ಪಂಡಿತ ಕೃಷ್ಣಾಚಾರ್ಯ ಮಣ್ಣೂರು ಹೇಳಿದರು. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯಕ್ತ ನಗರದ ಪಿ.ಜೆ. ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ‘ಪ್ರಾತಃ ಸಂಕಲ್ಪ ಗದ್ಯ’ದ ಪಾರಾಯಣ ಪೂರ್ವಕ ಪ್ರವಚನ ಕಾರ್ಯಕ್ರಮದ 4ನೇ ದಿನವಾದ ಮಂಗಳವಾರ ಮಾತನಾಡಿದರು. ರಾಘವೇಂದ್ರ ಸ್ವಾಮಿಗಳು ವಾಯು ದೇವರನ್ನು ಹೇಗೆ ಕಂಡಿದ್ದಾರೆ ಎಂದು ಈ ಗ್ರಂಥದಲ್ಲಿ ಬಹಳ ಸುಂದರವಾಗಿ ನಿರೂಪಣೆ ಮಾಡಿದ್ದಾರೆ. ನಾವು ಕೂಡ ಜ್ಞಾನಿಗಳನ್ನು ಯಾವ ದೃಷ್ಟಿಯಲ್ಲಿ ಕಾಣಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು. ರಾಯರು ವಾಯು ದೇವರು 32 ಲಕ್ಷಣಗಳಿಂದ ಕೂಡಿದವರು. ಆ ಲಕ್ಷಣಗಳು ಯಾವುವು ಎಂಬುದನ್ನು ಶಾಸ್ತ್ರದಲ್ಲಿ ತಿಳಿಸಿದ್ದಾರೆ. ವಾಯುದೇವರು ಕೇವಲ ದೇಹದ ಲಕ್ಷಣ ಅಲ್ಲ ತಮ್ಮ ಅನುಗ್ರಹದಿಂದ ಎಲ್ಲರಿಗೂ ಇರುವ ಸಂಶಯ ಹಾಗೂ ಅಜ್ಞಾನ ಕಳೆಯುವಂತಹವರು. ಪ್ರಣವ ಮೊದಲಾದ ಅನೇಕ ವೈಷ್ಣವ ಮಂತ್ರಗಳನ್ನು ಸಜ್ಜನರಿಗೆ ಜಪಿಸಲು ತಿಳಿಸಿಕೊಟ್ಟವರು ಎಂದು ಹೇಳಿದರು. ವಾಯುದೇವರ ಜಪದ ಮಹತ್ವವನ್ನು ನಾವು ಚೆನ್ನಾಗಿ ತಿಳಿಯಬೇಕು. ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಗೀತೆಯನ್ನು ಉಪದೇಶಿಸುವಾಗ ತನ್ನ ವಿಭೂತಿ ರೂಪ ಪರಿಚಯಿಸುತ್ತಾನೆ. ಆ ವಿಭೂತಿ ರೂಪಗಳಲ್ಲಿ ಒಂದು ವಿಭೂತಿ ರೂಪ ಭಗವಂತ ತಾನು ಜಪದಲ್ಲಿ ಇರಿಸಿದ್ದಾನೆ. ನಾವು ನಿತ್ಯದಲ್ಲಿ ಜಪದ ಮುಖಾಂತರ ಭಗವಂತನ ವಿಭೂತಿ ರೂಪವನ್ನು ಕಾಣಬೇಕು ಎಂದು ರಾಯರು ಈ ಗ್ರಂಥದ ಮೂಲಕ ನಮಗೆ ತಿಳಿಸಿದ್ದಾರೆ ಎಂದರು. ಕಲಿಯುಗದ ಕಾಮಧೇನು ಗುರುರಾಯರ ಹೆಸರು ಒಂದು ಮಂತ್ರ ಎಂದು ಇಂದು ಇಡೀ ಜಗತ್ತುಜಪಿಸುತ್ತದೆ.ಅಪ್ಪಣ್ಣ ಆಚಾರ್ಯರು ರಾಯರ ಸ್ತೋತ್ರದಲ್ಲಿ ‘ಶ್ರೀ ರಾಘವೇಂದ್ರಾಯ ನಮಃ’ಎನ್ನುವ 8 ಅಕ್ಷರದ ಮಂತ್ರವನ್ನು ಜಪಿಸಿದರೆ ಎಲ್ಲ ಇಷ್ಟಾರ್ಥಗಳು ಸಿದ್ಧಿಸಿ ಅನಿಷ್ಟಗಳು ಕಳೆದು ನಾವು ಉದ್ಧಾರ ಆಗುತ್ತೇವೆ ಎನ್ನುವುದನ್ನು ತಿಳಿಸಿದ್ದಾರೆ. ವಾಯುದೇವರು ಭಗವಂತನನ್ನು ಅನೇಕ ರೀತಿಯಿಂದ ಪೂರ್ಣವಾಗಿ ತಿಳಿದಿದ್ದಾರೆ. ನಮ್ಮ ಪ್ರತಿಯೊಂದು ಕರ್ಮಗಳಲ್ಲಿ, ಎಲ್ಲ ಸಮಯದಲ್ಲಿ, ಎಲ್ಲ ಅವಸ್ಥೆಗಳಲ್ಲಿ ವಾಯುದೇವರು ನಿಯಾಮಕರಾಗಿದ್ದಾರೆ. ನಾವು ಮಾಡುವ ಎಲ್ಲ ಕೆಲಸಗಳಿಗೆ ಸಾಕ್ಷಿಯಾಗಿದ್ದಾರೆ ಎಂದು ಹೇಳಿದರು. ನಾವು ಕರ್ಮ ಮಾಡುವಾಗ ಅನೇಕ ತಪ್ಪು ಮಾಡಿದರೂ ಅವುಗಳನ್ನ ಲೆಕ್ಕಿಸದೆ ನಮ್ಮನ್ನು ಕೈಹಿಡಿದು ದೇವರ ಮುಂದೆ ಕರೆದುಕೊಂಡು ಹೋಗಿ ಇವನು ದೀನನಾಗಿದ್ದಾನೆ, ದೂನನಾಗಿದ್ದಾನೆ, ಅನಾಥನಾಗಿದ್ದಾನೆ, ಶರಣಾಗತನಾಗಿದ್ದಾನೆ, ಇವನನ್ನು ಉದ್ದರಿಸು ಎಂದು ಎಲ್ಲ ಜೀವರ ಪರವಾಗಿ ಪ್ರಾರ್ಥನೆ ಮಾಡುವವರು ವಾಯುದೇವರು ಎಂದು ಮಹಿಮೆ ತಿಳಿಸಿದರು.