ಉಪಕಾರ ಸ್ಮರಣೆಯೊಂದಿಗೆ ನಡೆಯಲಿ ದೇವರ ಪೂಜೆ

dvg-krishnachar-Mannur_20240812002926616.jpg
Published on

ದಾವಣಗೆರೆ : ದೇವರು ಮಾಡುವ ಉಪಕಾರದ ಸ್ಮರಣೆಯ ಮೂಲಕ ಆತನನ್ನು ನಿತ್ಯವೂ ಪೂಜಿಸಬೇಕು ಎಂದು ಪಂಡಿತ ಕೃಷ್ಣಾಚಾರ್ಯ ಮಣ್ಣೂರು ಹೇಳಿದರು.  ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ, ನಗರದ ಪಿ.ಜೆ. ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯುತ್ತಿರುವ ‘ಪ್ರಾತಃ ಸಂಕಲ್ಪ ಗದ್ಯ’ದ ಪಾರಾಯಣ ಪೂರ್ವಕ ಪ್ರವಚನ ಕಾರ್ಯಕ್ರಮದ 2ನೇ ದಿನವಾದ ಭಾನುವಾರ ಮಾತನಾಡಿದರು.  ಭಗವಂತನು ನಮಗೆ ನೋಡಲು ಕಣ್ಣನ್ನು ನೀಡಿದ್ದಾನೆ. ಅಷ್ಟೇ ಅಲ್ಲ, ಆ ನೇತ್ರಗಳಿಂದ ನೋಡಲು ಬೇಕಾಗುವ ಬೆಳಕನ್ನು ಪ್ರಪಂಚದಲ್ಲಿ ಸದಾ ನಮಗೆ ನೀಡುತ್ತಿದ್ದಾನೆ. ಅಂತಹ ದೇವರಿಗೆ ಪ್ರತಿ ದಿನ ಒಂದು ದೀಪದ ಸಮರ್ಪಣೆಯ ಮೂಲಕ ಆತನ ಕಾರುಣ್ಯದ ಚಿಂತನೆ ಮಾಡಬೇಕು ಎಂದು ತಿಳಿಸಿದರು.  ಭಗವಂತ ಅನಂತ ವೇದ ಪ್ರತಿಪಾದ್ಯ. ಅನಂತ ಗುಣ ಪರಿಪೂರ್ಣ. ಅನಂತ ಜೀವ ನಿಯಾಮಕ, ಪರಮ ದಯಾಳು, ಕ್ಷಮಾ ಸಮುದ್ರನಾಗಿದ್ದಾನೆ. ದೇವರು ನಮ್ಮ ಮೇಲೆ ಮಾಡುವ ಕಾರುಣ್ಯ ಅಪಾರವಾಗಿದ್ದು ಅದನ್ನು ಚಿಂತಿಸುತ್ತಾ ನಿತ್ಯದಲ್ಲಿ ಆರಾಧಿಸಬೇಕು ಎಂದು ಹೇಳಿದರು.  ನೀರು ನೀಡುವ ನೀರಜಾಕ್ಷನಿಗೆ ಅಭಿಷೇಕದ ಮೂಲಕ ಆರಾಧಿಸಿ ಕೃತಾರ್ಥರಾಗಿದ್ದೇವೆ ಎನ್ನುವ ಭಾವನೆಯಿಂದ ತೃಪ್ತಿ ಹೊಂದಬೇಕು. ಈ ಎಲ್ಲ ಚಿಂತನೆಗಳನ್ನು ವಾಯುದೇವರು ತಾವು ಮಾಡಿ ಎಲ್ಲ ಜೀವರಾಶಿಗಳ ಅಂತರ್ಯಾಮಿಯಾಗಿದ್ದು, ಉಪಾಸನೆ ಮಾಡಿಸಿ ನಮಗೆ ಪುಣ್ಯವನ್ನು ಕೊಡಿಸಿ ಸುಖವನ್ನು ನೀಡುತ್ತಾರೆ ಎಂದು ಮಂತ್ರಾಲಯ ಪ್ರಭುಗಳು ತಿಳಿಸಿದ್ದಾರೆ.  ದೇವರೇ, ನೀನು ಭಕ್ತರು ಮಾಡುವ ಸಹಸ್ರಾರು ಅಪರಾಧಗಳನ್ನು ಸಹಿಸುವ ಸಹಿಷ್ಣುವಾಗಿರುವೆ ಎಂದು ಚಿಂತನೆಯನ್ನು ಮಾಡುತ್ತಾ ತಾವು ಯಾವ ಸಂದರ್ಭದಲ್ಲಿಯೂ ಕಿಂಚಿತ್ತು ಅಪರಾಧಗಳನ್ನು ಮಾಡದೇ ಇರುವ ವಾಯುದೇವರು ನಮ್ಮ ಪರವಾಗಿ ಭಗವಂತನನ್ನು ‘ಭಕ್ತ ಅಪರಾಧ ಸಹಿಷ್ಣು’ ಎಂದು ಕೊಂಡಾಡಿ, ನೀವು ಕೂಡ ಹೀಗೆ ಭಗವಂತನನ್ನು ಧ್ಯಾನಿಸಿ ದಿನದಲ್ಲಿ ಮಾಡುವ ಅನೇಕ ಅಪರಾಧಗಳನ್ನ ಕಳೆದುಕೊಳ್ಳಿ ಎಂದು ಮಾರ್ಗದರ್ಶನ ನೀಡಿದ್ದಾರೆ.  ರಾಘವೇಂದ್ರ ಗುರು ಸಾರ್ವಭೌಮರ ಈ ಪ್ರಾಥಃ ಸಂಕಲ್ಪ ಗದ್ಯದಲ್ಲಿ ವಾಯುದೇವರು ಭಗವಂತನ ಚಿಂತನೆಯನ್ನು ಮಾಡುತ್ತ ಎಲ್ಲ ಮಂತ್ರಗಳಿಂದ ಪ್ರತಿಪಾದ್ಯನಾದವನು ಎಂದು ಚಿಂತಿಸುತ್ತಾ ವಾಸುದೇವ, ನಾರಾಯಣ, ಪ್ರಣವ ಇವೇ ಮುಂತಾದ ಮಂತ್ರಗಳಿಂದ ಜಪಿಸುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net