

ದಾವಣಗೆರೆ : ಭಗವಂತನ ಚಿಂತನೆಯೊಂದಿಗೆ ನಮ್ಮ ದಿನಚರಿಯನ್ನು ಆರಂಭಿಸುವಂತೆ ಶ್ರೀ ರಾಘವೇಂದ್ರ ಸ್ವಾಮಿಗಳು ಸ್ವತಃ ರಚಿಸಿದ ‘ಪ್ರಾತಃ ಸಂಕಲ್ಪ ಗದ್ಯ’ ಗ್ರಂಥದಲ್ಲಿ ತಿಳಿಸಿದ್ದಾರೆ ಎಂದು ಪಂಡಿತ ಕೃಷ್ಣಾಚಾರ್ಯ ಮಣ್ಣೂರು ಹೇಳಿದರು. ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರಯುಕ್ತ, ನಗರದ ಪಿ.ಜೆ. ಬಡಾವಣೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶನಿವಾರ ಆರಂಭವಾದ ‘ಪ್ರಾತಃ ಸಂಕಲ್ಪ ಗದ್ಯ’ದ ಪಾರಾಯಣ ಪೂರ್ವಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳಗ್ಗೆ ಎದ್ದ ನಂತರ ಈ ದಿನ ಏನೇನು ಮಾಡಬೇಕು ಎನ್ನುವ ಯೋಜನೆಯನ್ನು ರೂಪಿಸಿಕೊಳ್ಳುವ ಪದ್ಧತಿಯನ್ನು ಅನೇಕರು ಅನುಸರಿಸುತ್ತಾರೆ. ಅದನ್ನೇ ರಾಯರು ‘ಸಂಕಲ್ಪದ ಮೂಲಕ ನಮ್ಮ ಕಾರ್ಯಗಳನ್ನು ಆರಂಭಿಸಬೇಕು’ ಎಂದು ಆ ಕಾಲದಲ್ಲೇ ಗದ್ಯದ ಮೂಲಕ ಹೇಳಿದ್ದಾರೆ. ಎಲ್ಲವನ್ನೂ ನಾನು ಮಾಡುತ್ತೇನೆ ಎನ್ನುವ ಭಾವನೆ ನಮ್ಮಲ್ಲಿರುತ್ತದೆ. ಆದರೆ ವಾಸ್ತವದಲ್ಲಿ ವಾಯುದೇವರು ನಮ್ಮೊಳಗಿದ್ದು ಎಲ್ಲ ಸತ್ಕಾರ್ಯಗಳನ್ನು ಮಾಡಿಸುತ್ತಾರೆ ಎಂಬ ಮಹಿಮೆಯನ್ನು ಈ ಕೃತಿಯಲ್ಲಿ ಮಂತ್ರಾಲಯ ಪ್ರಭುಗಳು ವಿವರಿಸಿದ್ದಾರೆ. ವಾಯುದೇವರ ಮಹಿಮೆ, ಅವರು ದೇವರನ್ನು ಹೇಗೆ ನೋಡುತ್ತಾರೆ ಎನ್ನುವುದರ ಕುರಿತು ಗ್ರಂಥದಲ್ಲಿ ಪ್ರಸ್ತಾಪಿಸಿದ್ದಾರೆ. ದೇವರು ಎಲ್ಲ ಶಬ್ದಗಳಿಂದಲೂ ಪ್ರತಿಪಾದ್ಯನಾಗಿದ್ದಾನೆ. ಧ್ವನಿಪೂರ್ವಕವಾದ ಶಬ್ದ (ಪೂಜೆ ಮಾಡುವಾಗಿನ ಘಂಟೆಯ ನಾದ) ಕೇಳಿಸುವಾಗಲೂ ಭಗವಂತನ ಧ್ಯಾನ ಮಾಡಬೇಕು. ಸ್ತೋತ್ರಗಳ (ವರ್ಣಾತ್ಮಕ ಶಬ್ದಗಳು) ಮೂಲಕವೂ ಆತನನ್ನು ಸ್ಮರಿಸುತ್ತೇವೆ. ಈ ರೀತಿಯ ಚಿಂತನೆ ನಮ್ಮಲ್ಲಿರಬೇಕು ಎಂದು ರಾಯರು ಗ್ರಂಥ ರಚನೆಯನ್ನು ಆರಂಭಿಸುತ್ತಾರೆ. ವಾಯು ದೇವರ ಜ್ಞಾನದ ಮಟ್ಟ ದೊಡ್ಡದು. ಪ್ರಳಯ ಕಾಲದಲ್ಲೂ ಅವರ ಜ್ಞಾನ ನಷ್ಟವಾಗುವುದಿಲ್ಲ. ಆ ಸಮಯದಲ್ಲೂ ಅವರು ವೇದ ಮಂತ್ರಗಳಿಂದ, ಪುರುಷಸೂಕ್ತಗಳಿಂದ, ನಾರಾಯಣ ಅಷ್ಟಾಕ್ಷರ ಮಂತ್ರ, ವಾಸುದೇವ ದ್ವಾದಶಾಕ್ಷರ ಮಂತ್ರದಿಂದ ಭಗವಂತನ ಚಿಂತನೆ ಮಾಡುತ್ತಾರೆ. ನಾವು ಜಪಗಳನ್ನು ಮಾಡುವಾಗ ಮನಸ್ಸು ಚಂಚಲವಾಗಿರುತ್ತದೆ. ಆದರೆ ವಾಯುದೇವರು ವಿಶೇಷ. ದೇವರ ಅನಂತ ಗುಣಗಳನ್ನು ಧ್ಯಾನ ಮಾಡುವ ಶಕ್ತಿ ಅವರಲ್ಲಿದೆ. ಅವರು ನಮ್ಮ ಅಂತರ್ಯಾಮಿಯಾಗಿದ್ದು ಎಲ್ಲವನ್ನೂ ಮಾಡಿಸುತ್ತಾರೆ ಎಂಬುದನ್ನು ರಾಯರು ಗ್ರಂಥದಲ್ಲಿ ತಿಳಿಸಿದ್ದಾರೆ. ಆಧುನಿಕ ಯುಗದಲ್ಲಿ ಜೀವನವನ್ನು ಯಾಂತ್ರಿಕವಾಗಿ ನಡೆಸದೇ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿರುವುದು ಸಜ್ಜನರ ಮೇಲೆ ರಾಯರು ಮಾಡಿರುವ ಕಾರುಣ್ಯವಾಗಿದೆ ಎಂದರು. ನಾವು ಕೇಳಿದ್ದನ್ನು ಕೊಡುತ್ತಾರೆ, ವಿದ್ಯೆ, ಆರೋಗ್ಯ ಕರುಣಿಸುತ್ತಾರೆ ಎನ್ನುವ ಏಕಮುಖವಾದ ದೃಷ್ಟಿಯಿಂದ ನಾವು ರಾಯರನ್ನು ನೋಡದೇ ನಾವು ಜ್ಞಾನ ಪಡೆದುಕೊಳ್ಳುವ ಮಾರ್ಗವನ್ನು ಅವರು ತೋರಿಸಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.