

ದಾವಣಗೆರೆ: ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಇರುವ ಶೇ.10 ಮೀಸಲಾತಿಯನ್ನು ಬ್ರಾಹ್ಮಣರಿಗೂ ಅನ್ವಯಿಸುವಂತೆ ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಹೇಳಿದರು.
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ನಗರದ ನಿಮಿಷಾಂಬ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ವಿಪ್ರ ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ‘ವಿಪ್ರಶ್ರೀ’, ಸಮಾಜದ ಸಾಧಕರಿಗೆ ಸನ್ಮಾನ ಹಾಗೂ ಮಂಡಳಿಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಶೇ.10 ಮೀಸಲಾತಿಯಿದೆ. ಕರ್ನಾಟಕದಲ್ಲಿ ಬ್ರಾಹ್ಮಣರು ಸೇರಿ 4 ಜಾತಿಗಳಿಗೆ ಆ ಸೌಲಭ್ಯ ಸಿಕ್ಕಿಲ್ಲ. ಇದನ್ನು ಜಾರಿಗೆ ತರುವಂತೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ 42.50 ಲಕ್ಷ ಬ್ರಾಹ್ಮಣರಿದ್ದೇವೆ. ಆದರೆ 44 ಉಪ ಜಾತಿಗಳಿವೆ. ಅವರೆಲ್ಲ ಒಗ್ಗಟ್ಟಾದರೆ ಸಮಾಜದ ಶಕ್ತಿ ಹೆಚ್ಚಾಗುತ್ತದೆ. ರಾಜ್ಯದ 21 ವಿಧಾನಸಭಾ ಕ್ಷೇತ್ರಗಳಲ್ಲಿ ಬ್ರಾಹ್ಮಣ ಮತದಾರರೇ ನಿರ್ಣಾಯಕರಿದ್ದೇವೆ. ನಮ್ಮ ಬಲವನ್ನು ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು.
ಮಂಡಳಿ ನಿರ್ದೇಶಕ ಪಿ.ಸಿ.ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಬಿ.ಪಿ.ಹರೀಶ್, ಮೇಯರ್ ಆರ್.ಜಯಮ್ಮ, ಮಂಡಳಿ ನಿರ್ದೇಶಕಿ ವತ್ಸಲ ನಾಗೇಶ್, ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ಬಿ.ಟಿ.ಅಚ್ಚುತ್, ಸಮಾಜದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಪಿ.ಎಸ್.ಮಂಜುನಾಥ್, ದಾವಣಗೆರೆ ನಗರ ಅಧ್ಯಕ್ಷ ಡಾ.ಶಶಿಕಾಂತ್, ಶ್ರೀ ಸದ್ಗುರು ಬ್ರಹ್ಮಚೈತನ್ಯ ಭಕ್ತ ಮಂಡಳಿ ಅಧ್ಯಕ್ಷ ಪಿ.ಸಿ.ಮಹಾಬಲೇಶ್ವರ ಇದ್ದರು.
ದೇಶಸ್ಥ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಡಾ.ಸುರೇಶ ಬಾಬು, ಅಡುಗೆ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುರಾಜ್, ಅನಿಲ್ ಬಾರೆಂಗಳ್ ಭಾಗವಹಿಸಿದ್ದರು. ಮಾಧವ ಪದಕಿ ನಿರೂಪಿಸಿದರು. ಸಹನಾ ಮಂಜುನಾಥ್ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 13 ಜನರಿಗೆ ‘ವಿಪ್ರಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜದ 33 ಸಾಧಕರಿಗೆ ಸನ್ಮಾನಿಸಲಾಯಿತು. ಪಿಯುಸಿಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದ 11 ವಿದ್ಯಾರ್ಥಿಗಳು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪರ್‌ಗಳಾದ 12 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಫೆಬ್ರವರಿಯಲ್ಲಿ ವಿರಾಟ್ ಶಕ್ತಿ ಪ್ರದರ್ಶನ
ಬರುವ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 1.50 ಲಕ್ಷ ಜನರನ್ನು ಸೇರಿಸಿ ಬ್ರಾಹ್ಮಣರ ವಿರಾಟ್ ಶಕ್ತಿ ಪ್ರದರ್ಶನಕ್ಕೆ ಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಂದಿನ ಸಮಾರಂಭಕ್ಕೆ ಆಹ್ವಾನಿಸಿ ಬ್ರಾಹ್ಮಣರ ಒಗ್ಗಟ್ಟನ್ನು ತೋರಿಸೋಣ ಎಂದು ಸಚ್ಚಿದಾನಂದ ಮೂರ್ತಿ ತಿಳಿಸಿದರು.
ಬ್ರಾಹ್ಮಣ ಸಮಾಜ ಬುದ್ಧಿವಂತರು, ಸಂಸ್ಕಾರವಂತರಿಂದ ಕೂಡಿದೆ. ಮಂಡಳಿಯ ಯೋಜನೆಗಳ ಪ್ರಯೋಜನವನ್ನು ಸಮಾಜದವರು ಪಡೆದುಕೊಳ್ಳಬೇಕು. ಕೆಳಸ್ತರದ ಸಮಾಜಗಳ ಬಗ್ಗೆಯೂ ಕಾಳಜಿ, ಮಾರ್ಗದರ್ಶನ ಇರಲಿ. ನನ್ನ ಬದುಕಿನಲ್ಲಿ ಬ್ರಾಹ್ಮಣ ಸಮಾಜದ ಹಿರಿಯರ ಮಾರ್ಗದರ್ಶನ ದೊರೆತಿದೆ.
ಪ್ರೊ.ಎನ್.ಲಿಂಗಣ್ಣ, ಮಾಯಕೊಂಡ ಶಾಸಕ
ಬ್ರಾಹ್ಮಣ ಸಮಾಜ ಸಕಲ ಜೀವರಾಶಿಗಳಿಗೆ ಒಳಿತನ್ನು ಹಾಗೂ ಲೋಕ ಕಲ್ಯಾಣವನ್ನು ಬಯಸುತ್ತದೆ. ಯಾರ ವಿರೋಧವನ್ನೂ ಕಟ್ಟಿಕೊಳ್ಳದೇ ಸಾಮರಸ್ಯ ಬಯಸುವ ಸಮಾಜವಾಗಿದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳಿಗಾಗಿ ನಿಮ್ಮ ಜತೆಗೆ ಇರುತ್ತೇನೆ. ಹಕ್ಕುಗಳನ್ನು ಪಡೆಯಲು ಸಂಘಟನೆ ಅನಿವಾರ್ಯ.
ಎಂ.ಪಿ.ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ