ಪವರ್‌ಗ್ರಿಡ್ ಕಾರ್ಪೊರೇಷನ್ ಜತೆ ಜಿಲ್ಲಾಡಳಿತ ಒಡಂಬಡಿಕೆ

power.jpg
Published on

ದಾವಣಗೆರೆ : ಪವರ್‌ಗ್ರಿಡ್ ಕಾರ್ಪೊರೇಷನ್ ಜತೆ ಜಿಲ್ಲಾಡಳಿತ ಒಡಂಬಡಿಕೆ
 ಕೇಂದ್ರ ಸರ್ಕಾರ ಅಧೀನದ ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಸಿಎಸ್‌ಆರ್ ನಿಧಿಯಡಿ ಚನ್ನಗಿರಿ ತಾಲೂಕಿನಲ್ಲಿ 2.40 ಕೋಟಿ ರೂ. ವೆಚ್ಚದಲ್ಲಿ ಮೂಲಸೌಲಭ್ಯ ಕಲ್ಪಿಸುವ ಕುರಿತು ಜಿಲ್ಲಾಡಳಿತದ ಜತೆಗೆ ಗುರುವಾರ ಒಡಂಬಡಿಕೆ ಮಾಡಿಕೊಳ್ಳಲಾಯಿತು.
 ಕಂಪನಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಯೋಜನೆ ಒಡಂಬಡಿಕೆಗೆ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಸಹಿ ಹಾಕಿದರು.
 ಈ ಒಡಂಬಡಿಕೆಯಂತೆ ಚನ್ನಗಿರಿ ತಾಲೂಕಿನ ಗೆದ್ಲಹಟ್ಟಿಯಿಂದ ಮಂಗೇನಹಳ್ಳಿ ವರೆಗೆ ರಸ್ತೆ, ಹಳ್ಳಕ್ಕೆ ಸೇತುವೆ, ಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
 ಈ ಸಂದರ್ಭದಲ್ಲಿ ಶಿವಾನಂದ ಕಾಪಶಿ ಮಾತನಾಡಿ, ಪವರ್‌ಗ್ರಿಡ್ ಕಂಪನಿಯ ಸಿಎಸ್‌ಆರ್ ನಿಧಿಯಡಿ ಇದು ಎರಡನೇ ಒಡಂಬಡಿಕೆಯಾಗಿದೆ. ಈಗಾಗಲೇ ಚಿಗಟೇರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲು 3.85 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ನೀಡಿದ್ದು ಕೆಲವೇ ದಿನಗಳಲ್ಲಿ ಆಸ್ಪತ್ರೆಗೆ ಆಧುನಿಕ ಯಂತ್ರಗಳು ತಲುಪಲಿವೆ ಎಂದು ತಿಳಿಸಿದರು.
 ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಲಭ್ಯ ಉತ್ತಮಪಡಿಸಲು ಉದ್ದೇಶಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸಾ ಘಟಕ ಆಗಬೇಕಿದೆ. ಇದರ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಬಲೀಕರಣದತ್ತ ಗಮನ ಹರಿಸಬೇಕಿದೆ. ಚಿಗಟೇರಿ ಆಸ್ಪತ್ರೆಯಲ್ಲಿ ಹೆಚ್ಚು ರೋಗಿಗಳು ಬರುತ್ತಿದ್ದು ಇರುವ ಸಿಬ್ಬಂದಿಯೇ ನಿಭಾಯಿಸುತ್ತಿದ್ದಾರೆ. ಅಲ್ಲಿನ ಒತ್ತಡವನ್ನು ಕಡಿಮೆ ಮಾಡಬೇಕಿದೆ ಎಂದು ಹೇಳಿದರು.
 ಪವರ್ ಗ್ರಿಡ್ ಕಂಪನಿಯ ನಿರ್ದೇಶಕ ಕೆ.ಎನ್. ಓಂಕಾರಪ್ಪ ಮಾತನಾಡಿ, ಚಿಗಟೇರಿ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಪೌಷ್ಟಿಕಾಂಶ ಸುಧಾರಣೆ ಸಂಬಂಧ ಸೌಲಭ್ಯ ಕಲ್ಪಿಸಲು 3.85 ಕೋಟಿ ರೂ. ಬಳಸಲಾಗುವುದು ಎಂದರು.
 ಸಂಸ್ಥೆಯ ಸಿಎಸ್‌ಆರ್ ನಿಧಿಯಡಿ ಇದುವರೆಗೆ ಜಿಲ್ಲೆಗೆ 13.50 ಕೋಟಿ ರೂ. ಮಂಜೂರಾತಿ ಆಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಬಿಸಿ ನೀರು, ವಿದ್ಯುದ್ದೀಪ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಪ್ರತಿ ವರ್ಷ 50 ಕೋಟಿ ರೂ.ಗಳನ್ನು ಸಿಎಸ್‌ಆರ್ ನಿಧಿಯಡಿ ಪಡೆಯಬೇಕೆಂಬ ಚಿಂತನೆ ಇದೆ ಎಂದು ತಿಳಿಸಿದರು.
 ಕಂಪನಿಯ ಜನರಲ್ ಮ್ಯಾನೇಜರ್ ಹರೀಶ್ ಕುಮಾರ್ ನಾಯರ್ ಕಂಪನಿ ಪರವಾಗಿ ಒಡಂಬಡಿಕೆಗೆ ಸಹಿ ಹಾಕಿದರು. ಬಿಜೆಪಿ ಮುಖಂಡ ಕೊಂಡಜ್ಜಿ ಜಯಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net