

ದಾವಣಗೆರೆ : ಪೌರ ಕಾರ್ಮಿಕರು ಕೆಟ್ಟ ಹವ್ಯಾಸಗಳಿಂದ ದೂರವಿದ್ದು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೌರಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಹಂತ ಹಂತವಾಗಿ ಈಡೇರಿಸಲು ಕ್ರಮ ಕೈಗೊಳ್ಳಲಿದೆ. ಪೌರ ಕಾರ್ಮಿಕರ ಮಕ್ಕಳಿಗೆ ಸರ್ಕಾರದ ವಸತಿಯುತ ಶಾಲೆಗಳಲ್ಲಿ ನೇರ ಪ್ರವೇಶ ನೀಡಲು ಸೂಚಿಸಲಾಗಿದೆ. ಒಳ್ಳೆಯ ಶಿಕ್ಷಣ ಕೊಡಿಸಿ ಮಕ್ಕಳನ್ನು ಉನ್ನತ ಸ್ಥಾನಕ್ಕೆ ಏರುವಂತೆ ಮಾಡಬೇಕು ಎಂದು ತಿಳಿಸಿದರು. ಕೆಟ್ಟ ಅಭ್ಯಾಸಗಳಿಂದ ಅನಾಹುತ ಮಾಡಿಕೊಂಡು, ನಿಮ್ಮನ್ನೇ ನಂಬಿದ ಕುಟುಂಬದವರಿಗೆ ಅನ್ಯಾಯ ಮಾಡಬಾರದು. ಬಂದ ವೇತನದಲ್ಲಿ ಹಣ ಉಳಿತಾಯ ಮಾಡಿ, ಒಳ್ಳೆಯ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಪಾಲಿಕೆ ಆಯುಕ್ತೆ ರೇಣುಕಾ ಪ್ರಾಸ್ತಾವಿಕವಾಗಿ ಮಾತನಾಡಿ, ಸೈನಿಕರು ದೇಶ ಕಾಯುವ ರೀತಿಯಲ್ಲಿ ಪೌರ ಕಾರ್ಮಿಕರು ಸ್ವಚ್ಛತೆ ಕಾಪಾಡುತ್ತಿದ್ದಾರೆ. ಇದರಿಂದಾಗಿ ನಾವೆಲ್ಲರೂ ಆರೋಗ್ಯವಾಗಿರುವುದು ಸಾಧ್ಯವಾಗಿದೆ. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವ ಒತ್ತೆ ಇಟ್ಟು ಕೆಲಸ ಮಾಡಿದ ಪೌರಕಾರ್ಮಿಕರ ಸೇವೆ ಮರೆಯುವಂತಿಲ್ಲ ಎಂದರು. ಆರೋಗ್ಯ ತಪಾಸಣೆ, ಚಿಕಿತ್ಸೆ ಸೌಲಭ್ಯ, ರಕ್ಷಣಾ ಪರಿಕರ, ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ, ವಿದ್ಯಾರ್ಥಿವೇತನ ಹೀಗೆ ಪೌರ ಕಾರ್ಮಿಕರ ಹಿತದೃಷ್ಟಿಯಿಂದ ಅನೇಕ ಕ್ರಮ ಕೈಗೊಳ್ಳಲಾಗಿದೆ. ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು. ಉಪ ಮೇಯರ್ ಯಶೋದಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್, ವಿಪಕ್ಷ ನಾಯಕ ಕೆ.ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯರಾದ ಸುಧಾ ಇಟ್ಟಿಗುಡಿ, ಆಶಾ ಉಮಾಶಂಕರ್, ಎಚ್.ಬಿ.ಗೋಣೆಪ್ಪ, ವೀಣಾ ನಂಜಪ್ಪ, ಎ.ನಾಗರಾಜ್, ಮತ್ತಿತರರು ಇದ್ದರು. ಅತ್ಯುತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರನ್ನು ಪಾಲಿಕೆಯಿಂದ ಸನ್ಮಾನಿಸಲಾಯಿತು.