ಶೈಕ್ಷಣಿಕ ಸಹಾಯಧನ ಕಡಿತದ ಆದೇಶ ವಾಪಸ್‌ಗೆ ಒತ್ತಾಯ

DVG-POSTER-21.jpg
Published on

ದಾವಣಗೆರೆ : ಶೈಕ್ಷಣಿಕ ಸಹಾಯಧನ ಕಡಿತದ ಆದೇಶ ವಾಪಾಸ್ ಸೇರಿ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 5ರಂದು ಮುಖ್ಯಮಂತ್ರಿ ಮನೆ ಚಲೋ ಹಮ್ಮಿಕೊಂಡಿರುವ ಕಟ್ಟಡ ಕಾರ್ಮಿಕ  ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ದಾವಣಗೆರೆಯಲ್ಲಿ ಭಾನುವಾರ ಪೋಸ್ಟರ್ ಬಿಡುಗಡೆ ಮಾಡಿದರು.   ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಸಿಎಂ ಮನೆ ಚಲೋಗೆ ಮುಂಚೆ ಪೋಸ್ಟರ್ ಬಿಡುಗಡೆ  ಮಾಡಿ ಗಮನ ಸೆಳೆದರು.  ಸಮಿತಿ  ಜಿಲ್ಲಾ ಸಂಚಾಲಕ ಆವರಗೆರೆ ಎಚ್.ಜಿ. ಉಮೇಶ್ ಮಾತನಾಡಿ, ಶೈಕ್ಷಣಿಕ ಧನ ಸಹಾಯ ಕಡಿತದ ಆದೇಶ ಹಿಂಪಡೆಯಬೇಕು. ಹೈಕೋರ್ಟ್ ಆದೇಶದಂತೆ 2021ರ ಅಧಿಸೂಚನೆ ಅನ್ವಯಿಸಿ ಧನ ಸಹಾಯ ಬಿಡುಗಡೆ ಮಾಡಬೇಕ.  2022ರಿಂದ ಈವರೆಗೆ ಬಾಕಿಯಿರುವ ಅರ್ಜಿಗೂ ಸಹಾಯಧನ ಪಾವತಿಸುವಂತೆ ಒತ್ತಾಯಿಸಿದರು.  ಸೌಲಭ್ಯ ಕೋರಿ ಕಾರ್ಮಿಕರು ಸಲ್ಲಿಸಿರುವ ಸಾವಿರಾರು ಅರ್ಜಿಗಳು ಕಚೇರಿಗಳಲ್ಲಿ ಕೊಳೆಯುತ್ತಿದ್ದು ಶೀಘ್ರ ವಿಲೇವಾರಿ ಮಾಡಬೇಕು. ಪಿಂಚಣಿದಾರರಿಗೆ ಹಣ ಬಿಡುಗಡೆ ಮಾಡಬೇಕು. ಪಿಂಚಣಿಗೆ ಅರ್ಜಿ ಸಲ್ಲಿಸಲು ಆಗುತ್ತಿರುವ ತಾಂತ್ರಿಕ ತೊಂದರೆ ನಿವಾರಿಸುವಂತೆ ಆಗ್ರಹಿಸಿದರು.  ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ಕಾರಣವಿಲ್ಲದೇ ತಿರಸ್ಕರಿಸಬಾರದು. ವಿಳಂಬ ಮಾಡದೇ ಕಾರ್ಡ್ ವಿತರಿಸಬೇಕು ಎಂದು ಮನವಿ ಮಾಡಿದರು.  ಮುಖಂಡ ಕೆ.ಎಚ್. ಆನಂದರಾಜ್ ಮಾತನಾಡಿ, ಹೈಕೋರ್ಟ್ ನಿರ್ದೇಶನದಂತೆ ಟೆಂಡರ್ ಆಧರಿತ ಎಲ್ಲ ಖರೀದಿ ವ್ಯವಹಾರ ನಿಲ್ಲಿಸಬೇಕು. ಖರೀದಿ ಅವ್ಯವಹಾರಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಹೊಸ ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆ ಮತ್ತು  ಸರ್ವರ್ ಸಮಸ್ಯೆ ಪರಿಹರಿಸಲು ಒತ್ತಾಯಿಸಿದರು.  ಬಾಕಿಯಿರುವ ಸೆಸ್ ಸಂಗ್ರಹ ಮಾಡಬೇಕು, ಖಾಸಗಿ ಹಾಗೂ ಸಾರ್ವಜನಿಕ ನಿರ್ಮಾಣ ಗಳಿಗೆ ಶೇ. 2ರಷ್ಟು ಸೆಸ್ ವಿಧಿಸಬೇಕು. ಕಲ್ಯಾಣ ಮಂಡಳಿ ಪುನಾರಚಿಸಿ ಕೇಂದ್ರ ಕಾರ್ಮಿಕ ಸಂಘಗಳ ಪ್ರತಿನಿಧಿ ನೇಮಿಸಿ, ಕಾರ್ಮಿಕರ ಸಮಸ್ಯೆ ಪರಿಹರಿಸುವಂತೆ ಕೋರಿದರು.  ಪದಾಧಿಕಾರಿಗಳಾದ ವಿ.ಲಕ್ಷ್ಮಣ್, ಶಿವಕುಮಾರ್ ಡಿ.ಶೆಟ್ಟರ್, ಎಸ್.ಎಂ.ಸಿದ್ದಲಿಂಗಪ್ಪ, ಎಚ್.ಕೆ.ಆರ್. ಸುರೇಶ್, ಐರಣಿ ಚಂದ್ರು, ಕೆ.ಎಸ್. ಆದಿಲ್ ಖಾನ್, ಎಸ್. ಪರಮೇಶ್, ಕುಕ್ಕುವಾಡ ಮಂಜುನಾಥ್, ಪವಿತ್ರಾ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net