ಕುಟುಂಬಕ್ಕೆ ಇರಲಿ ಎರಡೇ ಮಕ್ಕಳು

dvg-population.jpg
Published on

ದಾವಣಗೆರೆ :  ಜನಸಂಖ್ಯಾ ಸ್ಫೋಟವನ್ನು ತಡೆಗಟ್ಟಲು ಕುಟುಂಬದಲ್ಲಿ ಎರಡು ಮಕ್ಕಳಿಗೆ ಸೀಮಿತವಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೇವರಾಜ್ ಪಟಗಿ ಸಲಹೆ ನೀಡಿದರು.  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬಾಷನಗರದ ನಗರ ಆರೋಗ್ಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಮಾತನಾಡಿದರು.  ಚಿಕ್ಕ ಕುಟುಂಬವೇ ಸುಖಿ ಕುಟುಂಬ. ಪ್ರತಿ ಸಮುದಾಯದಲ್ಲಿ ವಿಭಿನ್ನ ಸಂಪ್ರದಾಯಗಳಿದ್ದರೂ, ಹೆಣ್ಣು ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಎರಡು ಮಕ್ಕಳಿಗೆ ಸೀಮಿತರಾಗಿರುವುದು ಸೂಕ್ತ ಎಂದು ಹೇಳಿದರು.  ಯಾವುದೇ ಕಾರಣಕ್ಕೂ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬಾರದು. ಹೆಣ್ಣಿಗೆ 18 ವರ್ಷ ಮತ್ತು ಗಂಡಿಗೆ 21 ವರ್ಷ ತುಂಬಿದ ನಂತರವೇ ವಿವಾಹವಾಗಬೇಕು. ನಂತರವೂ ಎರಡು ವರ್ಷಗಳ ಕಾಲ ಮಕ್ಕಳಾಗದಂತೆ ಅಂತರ ಕಾಪಾಡಿಕೊಳ್ಳುವುದು ಉತ್ತಮ ಎಂದು ಕಿವಿಮಾತು ಹೇಳಿದರು. ಭೂಮಿ ಅಷ್ಟೇ ಇದೆ, ಆದರೆ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.  ವೈದ್ಯಾಧಿಕಾರಿ ಡಾ. ಸುಧೀಂದ್ರ ಎನ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಬಾಷಾ ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಫಲವತ್ತತೆ ದರದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ಪ್ರದೇಶದಲ್ಲಿ 18 ಮಕ್ಕಳಿಗೆ ಜನ್ಮ ನೀಡಿದ ತಾಯಂದಿರೂ ಇದ್ದಾರೆ. ಹೆಚ್ಚು ಮಕ್ಕಳನ್ನು ಹೆರುವುದರಿಂದ ಗರ್ಭಕೋಶಕ್ಕೆ ಹಾನಿಯಾಗಬಹುದು. ಆದ್ದರಿಂದ ಎರಡು ಮಕ್ಕಳಿಗೆ ಸೀಮಿತರಾಗಿ, ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಸಾಕಷ್ಟು ಅಂತರ ಕಾಯ್ದುಕೊಳ್ಳಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.  ವೈದ್ಯಾಧಿಕಾರಿ ಡಾ. ರೇಖಾ ಎನ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್. ಉಮಾಪತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಟಾಚಲ ಕುಮಾರ್, ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು. ಸುಧಾ ಬಿ. ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net