

ದಾವಣಗೆರೆ : ಜಿಲ್ಲಾದ್ಯಂತ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಶ್ರದ್ಧಾ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು. ಇದು ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ಹಬ್ಬವಾಗಿದೆ. ಬೇಡಿದ ವರವನ್ನು ಕೊಡುವ ದೇವಿಯನ್ನು ಮನೆ ಮನೆಗಳಲ್ಲಿ ಪೂಜಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಬೆಳಗ್ಗೆ ತಂಬಿಗೆಯೊಳಗೆ ಅಕ್ಕಿಯನ್ನು ತುಂಬಿ, 5 ಬಗೆಯ ಚಿಗುರುಗಳನ್ನು ಹಾಕಲಾಗುತ್ತದೆ. ಅದರ ಮೇಲೆ ವೀಳ್ಯದೆಲೆ ಇಟ್ಟು ತೆಂಗಿನಕಾಯಿ ಕೂಡಿಸಲಾಯಿತು. ತೆಂಗಿನಕಾಯಿಗೆ ಕೆಲವರು ಬಂಗಾರ ಅಥವಾ ಬೆಳ್ಳಿಯ ಮುಖವನ್ನು ಕೂಡಿಸುತ್ತಾರೆ. ಕೇದಿಗೆ, ಬಗೆ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ. ತಾಂಬೂಲ ಹಾಗೂ ದಕ್ಷಿಣೆಯನ್ನು ಅರ್ಪಿಸಲಾಗುತ್ತದೆ. ಕಲಶದಲ್ಲಿ ಮಹಾಲಕ್ಷ್ಮಿಯ ಸನ್ನಿಧಾನ ಇರುತ್ತದೆ. ದೇವಿಗೆ ಶೋಡಶೋಪಚಾರ ಪೂಜೆಯನ್ನು ನೆರವೇರಿಸಲಾಗುತ್ತದೆ. ಮಂಗಳಾರತಿ ಮಾಡಿ, ಮಂತ್ರಾಕ್ಷತೆ ಹಾಕಿ ಪ್ರದಕ್ಷಿಣೆ ನಮಸ್ಕಾರ ಹಾಕಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮುತ್ತೈದೆಯರನ್ನು ಮನೆಗೆ ಕರೆದು ಅರಿಷಿಣ, ಕುಂಕುಮ ನೀಡಲಾಗುತ್ತದೆ. ಮಹಿಳೆಯರು ಹೊಸ ಬಟ್ಟೆ ತೊಟ್ಟು ಸಂಭ್ರಮದಿಂದ ಆಚರಣೆಯಲ್ಲಿ ಭಾಗಿಯಾಗುತ್ತಾರೆ. ಶುಕ್ರವಾರ ಏಕಾದಶಿ ಇದ್ದುದರಿಂದ ಕೆಲವರು ನೈವೇದ್ಯ ಇಟ್ಟಿರಲಿಲ್ಲ.