

ದಾವಣಗೆರೆ : ರಾಜ್ಯದಲ್ಲಿ ‘ಆಪರೇಷನ್ ಕಮಲ’ ಮತ್ತೆ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ನ ಶಾಸಕರನ್ನು ಖರೀದಿಸಲು ಕುದುರೆ ವ್ಯಾಪಾರ ಶುರುವಾಗಿದೆ ಎನ್ನುವ ಸುಳಿವನ್ನು ಅದೇ ಪಕ್ಷದ ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ ಗಣಿಗ ನೀಡಿದ್ದಾರೆ.
ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ರೀತಿಯಾಗಿ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಲಾಗುತ್ತಿದೆ ಎನ್ನುವುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಒಬ್ಬೊಬ್ಬ ಶಾಸಕನಿಗೆ 50 ಕೋಟಿ ರೂ, ಮಂತ್ರಿಗಿರಿಯ ಆಫರ್ ನೀಡಲಾಗುತ್ತಿದೆ. ಈ ಬಗ್ಗೆ ನಮ್ಮ ಬಳಿ ಮಾಹಿತಿ, ವಿಡಿಯೋ ಹಾಗೂ ಮಾತುಕತೆ ನಡೆಸಿದ ದಾಖಲೆಗಳೂ ಇವೆ. ಶೀಘ್ರವೇ ಬಹಿರಂಗಪಡಿಸುವುದಾಗಿ ಹೇಳಿದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ತೆಗೆದವರು ಒಂದು ತಂಡವಾಗಿ ಈಗ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಅವರ ಮನೆಗಳಿಗೆ ಹಾಗೂ ಅವರು ಇರುವ ಕಡೆಗಳಿಗೆ ಹುಡುಕಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದರು.
‘ದೆಹಲಿಗೆ ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗುತ್ತೇವೆ, ಅಮಿತ್ ಷಾ ಅವರನ್ನು ಭೇಟಿ ಮಾಡಿಸುತ್ತೇವೆ. ಈಗಾಗಲೇ ನಮ್ಮ ಬಳಿ ಕೆಲವು ಶಾಸಕರಿದ್ದಾರೆ’ ಎಂದು ಹೇಳಿ ಒಬ್ಬರನ್ನು ಕರೆದು ಸ್ಪೀಕರ್ ಫೋನ್‌ನಲ್ಲಿ ಅವರ ಮಾತುಗಳನ್ನು ಕೇಳಿಸಿ ನಂಬಿಕೆ ಬರುವಂತೆ ಮಾಡಿ ಒಬ್ಬೊಬ್ಬರನ್ನೇ ಸೆಳೆಯುವ ಗ್ಯಾಂಗ್ ಓಡಾಡುತ್ತಿದೆ ಎಂದು ವಿವರಿಸಿದರು.
ಈಗಾಗಲೇ ಕಾಂಗ್ರೆಸ್‌ನ 4 ಶಾಸಕರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ರಾಜ್ಯದ ನಾಲ್ಕೂ ದಿಕ್ಕಿನಿಂದ ಈ ಕಾರ್ಯಾಚರಣೆ ನಡೆದಿದೆ. ಮೈಸೂರು ರಸ್ತೆಯಲ್ಲಿ ಒಬ್ಬರು, ಬೆಳಗಾವಿಯವರು ಒಬ್ಬರು, ಅರಸೀಕೆರೆಯವರು ಇದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತ ಸಹಾಯಕರಾಗಿದ್ದ ಸಂತೋಷ್, ಶಾಸಕರನ್ನು ಖರೀದಿಸುತ್ತೇವೆ, ಸರ್ಕಾರವನ್ನು ಬೀಳಿಸುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆ ರೀತಿಯಾಗಿ ಓಡಾಡುತ್ತಿರುವ ಇನ್ನೂ ಕೆಲವು ಮಹಾನುಭಾವರ ಬಗ್ಗೆ ವಿಡಿಯೋಗಳಿವೆ ಎಂದು ತಿಳಿಸಿದರು.
ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ತಂದಿದ್ದೇವೆ. ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬಿಜೆಪಿಯವರು ಸಂಪರ್ಕಿಸಿರುವ ಶಾಸಕರೊಂದಿಗೆ ಡಿಕೆಶಿ ಮಾತನಾಡಿ ಎಲ್ಲ ವಿಚಾರ ಕಲೆಹಾಕಿದ್ದಾರೆ ಎಂದು ಹೇಳಿದರು.
ಹಳಬರು, ಹೊಸಬರು ಇಬ್ಬರನ್ನೂ ಭೇಟಿ ಮಾಡಿದ್ದಾರೆ, ಕೈ ಮುಗಿದು ಕೇಳಿಕೊಂಡಿದ್ದಾರೆ. ನಮ್ಮವರು ಪ್ರಾಮಾಣಿಕ ಶಾಸಕರಾಗಿದ್ದು ಇದಕ್ಕೆಲ್ಲ ಸೊಪ್ಪು ಹಾಕಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಬೆಳವಣಿಗೆ ಸರಿಯಲ್ಲ ಎಂದು ಹೇಳಿದರು.
ಈ ವಿಷಯದಲ್ಲಿ ಕೆಲವರು ಎಕ್ಸ್‌ಪರ್ಟ್‌ಗಳಿದ್ದಾರೆ. ನಿಮ್ಮನ್ನು ದೆಹಲಿಗೆ ಕಳಿಸುತ್ತೇವೆ, ಗೃಹ ಸಚಿವರನ್ನು ಭೇಟಿ ಮಾಡಿಸುತ್ತೇವೆ. ನಾವು ಬರದಿದ್ದರೂ ವಿಮಾನದಲ್ಲಿ ಕಳಿಸಿಕೊಡುತ್ತೇವೆ. ಅಲ್ಲಿ ನಿಮ್ಮನ್ನು ಕರೆದುಕೊಂಡು ಹೋಗಲು ಬರುತ್ತಾರೆ. ಹೀಗೆ ಹವಾಲಾ ಮಾದರಿಯಲ್ಲಿ ಇದೆಲ್ಲವೂ ನಡೆಯುತ್ತಿದೆ. ನಾನು ಪಕ್ಷ ನಿಷ್ಠೆ ಹೊಂದಿರುವುದರಿಂದ ನನ್ನನ್ನು ಅವರು ಭೇಟಿಯಾಗಿಲ್ಲ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮಾಜಿ ಸಚಿವ ಮುನಿರತ್ನ ಅವರಿಗೆ ಚಲನಚಿತ್ರ ನಿರ್ಮಾಣ ಮಾಡಿದ ಅನುಭವವಿದೆ. ಹಾಗಾಗಿ ಅವರು ಡೈಲಾಗ್ ಹೊಡೆಯುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಯಾರಿಗೂ ಆಮಿಷ ತೋರಿಸಿಲ್ಲ. ಬಿಜೆಪಿಯ ಕೆಲವು ಶಾಸಕರು ಸ್ವ ಇಚ್ಛೆಯಿಂದ ತತ್ವ, ಸಿದ್ಧಾಂತವನ್ನು ಒಪ್ಪಿ ಬರುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದರು.
ಹುಲಿ ಉಗುರು ಪ್ರಕರಣದಲ್ಲಿ ಆರೋಪಿಯಾಗಿರುವ ವರ್ತೂರು ಸಂತೋಷ್ ಅಮಾಯಕ ರೈತ. ನಾವು ರೈತರ ಪರವಾಗಿ ಇರಬೇಕು. ಅವರೊಬ್ಬರನ್ನೇ ಏಕೆ ಬಲಿ ಕೊಡುತ್ತೀರಿ, ಇನ್ನೂ ಯಾರ ಬಳಿ ಹುಲಿ ಉಗುರು ಸಿಕ್ಕಿದೆಯೋ ಅವರೆಲ್ಲರನ್ನೂ ಬಂಧಿಸಿ. ಒಬ್ಬರಿಗೊಂದು, ಇನ್ನೊಬ್ಬರಿಗೊಂದು ನ್ಯಾಯ ಏಕೆ ಎಂದರು.
...
* ಡಿಕೆಶಿ ಸಿಎಂ ಆಗುವುದು ಗ್ಯಾರಂಟಿ
ಅಧಿಕಾರ ಹಂಚಿಕೆ ವಿಚಾರವಾಗಿ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಎರಡೂವರೆ ವರ್ಷಗಳ ನಂತರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಗ್ಯಾರಂಟಿ ಎಂದು ರವಿಕುಮಾರ ಗಣಿಗ ಹೇಳಿದರು.
ಅವರು ಪಕ್ಷಕ್ಕೆ ದುಡಿದಿದ್ದಾರೆ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಯಾವುದೇ ಒಪ್ಪಂದ ಆಗಿಲ್ಲ, ಹೈಕಮಾಂಡ್ ಮಟ್ಟದಲ್ಲಿ ಯಾವ ರೀತಿ ಚರ್ಚೆಯಾಗಿದೆ ಎಂದು ಗೊತ್ತಿಲ್ಲ. ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಕಾಲ ಬಂದಾಗ ಎಲ್ಲವೂ ನಿರ್ಣಯವಾಗುತ್ತದೆ ಎಂದರು. ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.
...
(ಕೋಟ್)
ಬಿಜೆಪಿಯವರು ಎರಡು ಬಾರಿ ಅಧಿಕಾರಕ್ಕೆ ಬಂದಾಗಲೂ ಹಿಂಬಾಗಿಲಿನಿಂದ ರಾಜಕೀಯ ಮಾಡಿದ್ದಾರೆ. 2008 ಮತ್ತು 2018ರಲ್ಲೂ ಅವರಿಗೆ ಶಾಸಕರ ಕೊರತೆಯಿತ್ತು. ಆಪರೇಷನ್ ಕಮಲದ ಮಾರ್ಗವನ್ನೇ ಅನುಸರಿಸಿದರು. ಅವರಿಗೆ ಜನಹಿತ ಮುಖ್ಯವಾಗಿಲ್ಲ. ಈಗ ಮತ್ತೆ ಕುದುರೆ ವ್ಯಾಪಾರ ಆರಂಭಿಸಿದ್ದಾರೆ. ನನ್ನ ಗಮನಕ್ಕೂ ಬಂದಿದೆ. ನಾನು ಪಕ್ಷಕ್ಕೆ ನಿಷ್ಠನಾಗಿರುವುದರಿಂದ ನನ್ನ ಬಳಿಗೆ ಯಾರೂ ಬರುವುದಿಲ್ಲ.
ಬಸವರಾಜು ಶಿವಗಂಗಾ, ಚನ್ನಗಿರಿ ಕಾಂಗ್ರೆಸ್ ಶಾಸಕ
...