ಪಕ್ಷ ತಾಯಿ ಇದ್ದಂತೆ, ಕಷ್ಟ-ಸುಖದಲ್ಲಿ ಜತೆಗಿರಬೇಕು

SA-RAMADAS-ex-miniter-MYSURE.jpg
Published on

ದಾವಣಗೆರೆ : ಪಕ್ಷ ತಾಯಿ ಇದ್ದಂತೆ. ಕಷ್ಟವಿರಲಿ, ಸುಖವಿರಲಿ ಜತೆಗಿರಬೇಕು. ಅಂಥ ಕಾರ್ಯಕರ್ತರು ಬಿಜೆಪಿಯಲ್ಲಿದ್ದಾರೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.
 ಕೆಲವು ನಾಯಕರು ಬಿಜೆಪಿ ಬಿಡುತ್ತಿರುವ ವಿಚಾರವಾಗಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿ, ನಮಗೂ ಹಲವು ಪರೀಕ್ಷೆಗಳು ಬಂದವು, ಅದನ್ನೆಲ್ಲ ಎದುರಿಸಿದ್ದೇವೆ. ನಾವೆಲ್ಲ ಪಕ್ಷ ಕಟ್ಟಿ ಬೆಳೆಸಿದವರು. ವರಿಷ್ಠರು ನಿರ್ಧಾರ ಮಾಡಿದಾಗ ಅದಕ್ಕೆ ನಾವು ಬದ್ಧರಾಗಿರಬೇಕು. ಪಕ್ಷ ನಮಗೆ ಎಲ್ಲವನ್ನೂ ಕೊಟ್ಟಿದೆ ಎಂಬ ತೃಪ್ತಿ ಇರಬೇಕು ಎಂದರು.
 ಪಕ್ಷದ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕನ ಆಯ್ಕೆ ವರಿಷ್ಠರಿಗೆ ಬಿಟ್ಟ ವಿಚಾರ. ಪಂಚರಾಜ್ಯ ಚುನಾವಣೆಗಳಿವೆ. ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.
 ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರವಾಗಿ ಕೇಂದ್ರದ ನಾಯಕರು ಈಗಾಗಲೇ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್‌ನವರು ಎನ್‌ಡಿಎ ಪಾಲುದಾರರಾಗಿ ಬಂದಿದ್ದಾರೆ ಎಂದು ಕೇಂದ್ರದ ನಾಯಕರು ಹೇಳಿದ್ದಾರೆ ಎಂದು ಉತ್ತರಿಸಿದರು.
 ‘ಇಂಡಿಯಾ’ ಬ್ರಿಟಿಷರು ಬಿಟ್ಟು ಹೋದ ಹೆಸರು. ‘ಭಾರತ’ ಎಂಬುದು ಗರ್ವದ ವಿಷಯ ಎಂದು ದೇಶದ ಹೆಸರು ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
 ಪಠ್ಯಪುಸ್ತಕಗಳಲ್ಲಿ ಸಕಾರಾತ್ಮಕ ಅಂಶಗಳಿರಬೇಕು. ದೇಶಪ್ರೇಮವನ್ನು ತುಂಬುವಂತಿರಬೇಕು. ನಮ್ಮ ಇತಿಹಾಸವನ್ನು ತಿಳಿಸುವ ಕೆಲಸವಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net