

ದಾವಣಗೆರೆ : ದಕ್ಷಿಣ ಭಾರತವನ್ನು ರಾಜಕೀಯವಾಗಿ ನಗಣ್ಯಗೊಳಿಸುವ ಸಂಚು ನಡೆದಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡ ಡಾ. ಸಿದ್ದನಗೌಡ ಪಾಟೀಲ್ ಆರೋಪಿಸಿದರು. ಪಕ್ಷದ ಶತಮಾನೋತ್ಸವ ಸಂಭ್ರಮದ ಅಂಗವಾಗಿ ನಗರದ ರೋಟರಿ ಕ್ಲಬ್ ಸಿ. ಕೇಶವಮೂರ್ತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಿಪಿಐ ಜಿಲ್ಲಾ ಸಂಘಟನಾ ಸಮಾವೇಶದಲ್ಲಿ ಮಾತನಾಡಿದರು. ದಕ್ಷಿಣದ ರಾಜ್ಯಗಳು ದೇಶಕ್ಕೆ ಅತಿಹೆಚ್ಚು ತೆರಿಗೆಯನ್ನು ನೀಡುತ್ತಿವೆ, ಪ್ರತಿಯಾಗಿ ಈ ರಾಜ್ಯಗಳಿಗೆ ಕಡಿಮೆ ಹಣ ಒದಗಿಸಲಾಗುತ್ತಿದೆ. ಉತ್ತರ ಭಾರತವೇ ಮೇಲುಗೈ ಸಾಧಿಸಬೇಕು ಎಂಬ ಪಿತೂರಿ ನಡೆದಿದೆ. ದೇಶದ ಸಮಗ್ರತಗೆ ಇದರಿಂದ ಧಕ್ಕೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ದೇಶದ ಚುನಾವಣಾ ಆಯೋಗ ಬಿಜೆಪಿಯ ಆಯೋಗದಂತಾಗಿದೆ, ಅದರ ಪಾವಿತ್ರೃವನ್ನು ಹಾಳು ಮಾಡಲಾಗುತ್ತಿದೆ. ಮತಗಳ್ಳತನ ನಡೆದಿದೆ. ಪ್ರಜಾಸತ್ತೆಯನ್ನು ನಾಶ ಮಾಡುವ ಪ್ರಯತ್ನ ನಡೆದಿದೆ ಎಂದು ದೂರಿದರು. ಅಮೆರಿಕದ ಅಧ್ಯಕ್ಷ ಟ್ರಂಪ್ ಹೇಳಿದ ಕಾರಣಕ್ಕೆ ಪಾಕಿಸ್ತಾನದ ಮೇಲೆ ನಡೆಸಿದ್ದ ಯುದ್ಧವನ್ನು ಪ್ರಧಾನಿ ಮೋದಿ ಅವರು ನಿಲ್ಲಿಸಿದರು. ಇದು ಗುಲಾಮಗಿರಿಯ ಸಂಕೇತ ಎಂದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಪಕ್ಷದ ರಾಜ್ಯ ಸಹ ಕಾರ್ಯದರ್ಶಿ ಅಮ್ಜದ್, ಮುಖಂಡರಾದ ನಿಂಗಪ್ಪ, ಹನುಮನಗೌಡ್ರು, ಎಸ್.ಎಸ್. ಮಲ್ಲಮ್ಮ, ಸರೋಜಮ್ಮ, ಲಕ್ಷ್ಮಣ್, ಯಲ್ಲಪ್ಪ, ಕೆ.ಜಿ. ಶಿವಮೂರ್ತಿ ಇದ್ದರು. ಐರಣಿ ಚಂದ್ರು ಸ್ವಾಗತಿಸಿದರು. ಸಮಾರಂಭಕ್ಕೂ ಮೊದಲು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ರೋಟರಿ ಭವನದ ವರೆಗೆ ಮೆರವಣಿಗೆ ನಡೆಯಿತು.