ಅಪರಾಧ ನಿಗ್ರಹಕ್ಕೆ ಕೌಶಲ ಹೆಚ್ಚಳ ಸಹಾಯಕ

dvg-police.jpg
Published on

ದಾವಣಗೆರೆ : ಪೊಲೀಸರು ಹೆಚ್ಚು ಕೌಶಲ ಹೊಂದುವುದರಿಂದ ಅಪರಾಧ ನಿಗ್ರಹಕ್ಕೆ ನೆರವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಪೂರ್ವ ವಲಯ ಪೊಲೀಸ್ ಕರ್ತವ್ಯ ಕೂಟ ಉದ್ಘಾಟಿಸಿ ಮಾತನಾಡಿ, ಇಂಥ ಕರ್ತವ್ಯ ಕೂಟಗಳಲ್ಲಿ ಕಲಿಯುವ ಕೌಶಲಗಳು ದೀರ್ಘಾವಧಿಯ ವರೆಗೆ ನೆರವಾಗುತ್ತವೆ ಎಂದು ಹೇಳಿದರು.  ಕಾನೂನು, ಸುವ್ಯವಸ್ಥೆ ಹೊಂದುವುದೂ ಸಹ ನಾಗರಿಕರ ಹಕ್ಕುಗಳಲ್ಲಿ ಒಂದಾಗಿದೆ. ಅದನ್ನು ಒದಗಿಸಲು ಅಪರಾಧ ಪತ್ತೆ ಹಾಗೂ ತನಿಖಾ ವ್ಯವಸ್ಥೆ ಬಲಿಷ್ಠವಾಗಿರಬೇಕು. ಅಪರಾಧಗಳನ್ನು ಪತ್ತೆ ಮಾಡಿ ಪ್ರಕರಣ ನೋಂದಾಯಿಸಿ, ಆರೋಪ ಪಟ್ಟಿ ದಾಖಲಿಸುವುದರ ಜತೆಗೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವವರೆಗೂ ಪೊಲೀಸರ ಜವಾಬ್ದಾರಿ ಇರುತ್ತದೆ ಎಂದು ತಿಳಿಸಿದರು.  ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆಯನ್ನು ಜವಾಬ್ದಾರಿಯಿಂದ ಗಮನಿಸಬೇಕು. ವಿಚಾರಣೆ ಪೂರ್ಣಗೊಳ್ಳುವವರೆಗೂ ಉದಾಸೀನತೆ ತೋರಬಾರದು ಎಂದು ಕಿವಿಮಾತು ಹೇಳಿದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ತನಿಖೆಯಲ್ಲಿ ಕೌಶಲ ಹೆಚ್ಚಿಸಿಕೊಂಡರೆ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವೂ ಹೆಚ್ಚಾಗುತ್ತದೆ. ತನಿಖೆ ವೈಜ್ಞಾನಿಕವಾಗಿರಬೇಕು, ತನಿಖಾ ವರದಿಯಲ್ಲಿ ಗೊಂದಲಕ್ಕೆ ಅವಕಾಶ ಇರಬಾರದು ಎಂದು ಸಲಹೆ ನೀಡಿದರು.  ಸಂತ್ರಸ್ತರಿಗೆ ನ್ಯಾಯ ಒದಗಿಸುವುದೂ ಸಹ ಸಾಮಾಜಿಕ ನ್ಯಾಯದ ಭಾಗವಾಗಿದೆ. ಇದೇ ತನಿಖೆಯ ಉದ್ದೇಶ ಆಗಿರಬೇಕು ಎಂದು ಹೇಳಿದರು.  ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ಕರ್ತವ್ಯ ಕೂಟದ ನೋಡಲ್ ಅಧಿಕಾರಿ ಹಾಗೂ ಡಿವೈಎಸ್‌ಪಿ ಎ.ಕೆ. ರುದ್ರೇಶ್, ವಲಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದವರನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕಳಿಸಲಾಗುವುದು ಎಂದು ತಿಳಿಸಿದರು.  ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ್, ಜಿ. ಮಂಜುನಾಥ್ ಹಾಗೂ ಆರ್‌ಎಫ್‌ಎಸ್‌ಎಲ್ ಉಪ ನಿರ್ದೇಶಕಿ ಛಾಯಾ ಕುಮಾರಿ ಇದ್ದರು. ಮಲ್ಲಿಕಾರ್ಜುನ್ ಶಾನಭೋಗ್ ಪ್ರಾರ್ಥಿಸಿದರು. ಸಿಪಿಸಿಗಳಾದ ಸಂಗೇನಹಳ್ಳಿ ದೇವರಾಜ ಹಾಗೂ ಎಚ್.ಎಸ್. ಸಿದ್ಧಾರ್ಥ ನಿರೂಪಿಸಿದರು. ಡಿವೈಎಸ್ಪಿ ಪಿ.ಬಿ. ಪ್ರಕಾಶ್ ವಂದಿಸಿದರು.  ...  (ಬಾಕ್ಸ್)  ಡಿಜಿಟಲ್ ಸಾಕ್ಷಿಗಳು ಹೆಚ್ಚು ಪರಿಣಾಮಕಾರಿ  ಡಿಜಿಟಲ್ ಸಾಕ್ಷಿಗಳನ್ನು ಈಗ ಪ್ರಾಥಮಿಕ ಸಾಕ್ಷಿಗಳೆಂದು ಪರಿಗಣಿಸಲಾಗುತ್ತಿದೆ. ಪೊಲೀಸರು ಹಾಗೂ ಆರೋಪಿಗಳ ಹೇಳಿಕೆಗಳಿಗಿಂತ ಡಿಜಿಟಲ್ ಸಾಕ್ಷಿಗಳು ಹೆಚ್ಚು ಪರಿಣಾಮಕಾರಿಯಾಗಿವೆ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.  ಕಂತೆ ಕಡತಗಳಿಗಿಂತ ವಿಡಿಯೋ ಸಾಕ್ಷಿಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ. ಆದರೂ, ಕೆಲವೊಮ್ಮೆ ಸಿ.ಸಿ. ಟಿ.ವಿ. ಸಾಕ್ಷಿಗಳನ್ನು ಕಡೆಗಣಿಸುವುದು ಕಂಡು ಬರುತ್ತದೆ. ಹಾಗೆ ಆಗಬಾರದು ಎಂದರು.  ಮೊಬೈಲ್ ಮೂಲಕ ತೆಗೆಯುವ ಚಿತ್ರ ಹಾಗೂ ವಿಡಿಯೋಗಳೂ ಮಹತ್ವದ ಸಾಕ್ಷಿಗಳಾಗುತ್ತವೆ. ಹೀಗಾಗಿ ಡಿಜಿಟಲ್ ಸಾಕ್ಷಿಗಳನ್ನು ಸಂಗ್ರಹಿಸುವ ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.  ದಾವಣಗೆರೆ ಜಿಲ್ಲೆಯಲ್ಲಿ 32 ಕೋಟಿ ರೂ. ಸೈಬರ್ ವಂಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದಬೇಕು. ಎ.ಐ. ತಂತ್ರಜ್ಞಾನ ಮೊಬೈಲ್‌ಗಳಲ್ಲೂ ಲಭ್ಯವಿದ್ದು, ಬಳಸಿಕೊಳ್ಳಬೇಕು ಎಂದರು.  ...    * ಪೊಲೀಸ್ ಕರ್ತವ್ಯ ಕೂಟದಲ್ಲಿ ಎರಡು ದಿನ 5 ವಿಭಾಗಗಳಲ್ಲಿ ಸ್ಪರ್ಧೆ  * ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಜಿಲ್ಲೆಗಳ ಪೊಲೀಸರು ಭಾಗಿ  * ವಿಧಿವಿಜ್ಞಾನ, ಕಂಪ್ಯೂಟರ್ ತಿಳಿವಳಿಕೆ, ಶ್ವಾನ ದಳ, ಫೋಟೋ, ವಿಡಿಯೋ, ಬಾಂಬ್ ಪತ್ತೆ - ನಿಷ್ಕ್ರಿಯ ವಿಭಾಗಗಳಲ್ಲಿ ಸ್ಪರ್ಧೆ  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net