

ದಾವಣಗೆರೆ : ಪೂರ್ವ ವಲಯದ ಡಿಐಜಿ ಆಗಿ ಬಿ. ರಮೇಶ್ ಶುಕ್ರವಾರ ಅಧಿಕಾರ ವಹಿಸಿಕೊಂಡರು. ಡಾ. ಕೆ. ತ್ಯಾಗರಾಜನ್ ಅಧಿಕಾರ ಹಸ್ತಾಂತರ ಮಾಡಿದರು. ಮೂಲತಃ ತೆಲಂಗಾಣದವರಾದ ರಮೇಶ್, 2009 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ (ಕರ್ನಾಟಕ ಕೇಡರ್). ಪ್ರೊಬೇಷನರಿ ಅಧಿಕಾರಿಯಾಗಿ ರಾಯಚೂರಿನಲ್ಲಿ ಕರ್ತವ್ಯ ಆರಂಭಿಸಿದರು. ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಎಎಸ್‌ಪಿಯಾಗಿ 2011 ರಿಂದ 2013ರ ವರೆಗೆ ಕೆಲಸ ಮಾಡಿದರು. ಬಡ್ತಿಯಾಗಿ 2013 ರಲ್ಲಿ ಹುಬ್ಬಳ್ಳಿ-ಧಾರವಾಡ ಡಿಸಿಪಿ (ಕಾನೂನು, ಸುವ್ಯವಸ್ಥೆ)ಯಾಗಿ ಸೇವೆ ಸಲ್ಲಿಸಿದರು. ಮೂರು ವರ್ಷ ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದರು. 2016 ರಲ್ಲಿ ಹಾವೇರಿ ಎಸ್ಪಿ, 2017 ರಿಂದ ರಾಮನಗರ ಎಸ್ಪಿ, ನಂತರ ಬೆಂಗಳೂರು ನಗರ ಡಿಸಿಪಿ (ಪಶ್ಚಿಮ ವಿಭಾಗ), ಸಿಐಡಿಯಲ್ಲೂ ಕೆಲಸ ಮಾಡಿದ ಅನುಭವ. 2022 ರಿಂದ ಮೈಸೂರು ಪೊಲೀಸ್ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಡಿಐಜಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ ಎಂ. ಸಂತೋಷ, ಜಿ. ಮಂಜುನಾಥ ಹಾಗೂ ಜಿಲ್ಲೆಯ ಡಿವೈಎಸ್ಪಿಗಳು ಹಾಗೂ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು. ... (ಬಾಕ್ಸ್) ಜನಸ್ನೇಹಿ ಪೊಲೀಸ್‌ಗೆ ಆದ್ಯತೆ ಸಾರ್ವಜನಿಕರಿಗೆ ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಬರುವ ರೀತಿಯಲ್ಲಿ, ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಆದ್ಯತೆ ನೀಡಲಾಗುವುದು ಎಂದು ನೂತನ ಡಿಐಜಿ ರಮೇಶ್ ಹೇಳಿದರು. ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪೂರ್ವ ವಲಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ, ಅಕ್ರಮ ಚಟುವಟಿಕೆ, ಸಮಾಜ ವಿರೋಧಿ ಶಕ್ತಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದರು. ಹಾವೇರಿ ಜಿಲ್ಲೆಯ ಎಸ್ಪಿಯಾಗಿ ಈ ಹಿಂದೆ ಕೆಲಸ ಮಾಡಿದ್ದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.