ಪಟಾಕಿ ಸಿಡಿಸುವಾಗ ಸುರಕ್ಷತೆಗೆ ಇರಲಿ ಆದ್ಯತೆ

dvg-sp-uma-prashant-aug-25.jpg
Published on

ದಾವಣಗೆರೆ : ದೀಪಾವಳಿ ಹಬ್ಬದ ಅಂಗವಾಗಿ ಪಟಾಕಿ ಸಿಡಿಸುವಾಗ ಸಾರ್ವಜನಿಕರು ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.  ಮಾಲಿನ್ಯಮುಕ್ತ ಹಾಗೂ ಸುರಕ್ಷತೆಗಾಗಿ ಹಸಿರು ಪಟಾಕಿಗಳನ್ನು ಬಳಕೆ ಮಾಡಬೇಕು. ನಿಷೇಧಿತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪಟಾಕಿ ಹಚ್ಚಬಾರದು. ಜವಾಬ್ದಾರಿಯುತವಾಗಿ ಹಬ್ಬವನ್ನು ಆಚರಿಸಬೇಕು.  ಪಟಾಕಿ ಬಳಕೆ ಮಾಡುವಾಗ ಮುಂಜಾಗ್ರತೆ ವಹಿಸಬೇಕು. ಬಕೆಟ್ಗಳಲ್ಲಿ ನೀರು, ಮರಳು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಸಣ್ಣ ಮಕ್ಕಳಿಗೆ ಪಟಾಕಿಗಳನ್ನು ನೀಡಬಾರದು. ಹಿರಿಯರನ್ನು, ಮಕ್ಕಳನ್ನು ದೂರ ಇರುವಂತೆ ನೋಡಿಕೊಳ್ಳಬೇಕು.  ಅತಿಯಾದ ಶಬ್ದವನ್ನುಂಟು ಮಾಡುವ ಹಾಗೂ ಸುರಕ್ಷಿತವಲ್ಲದ ಪಟಾಕಿಗಳನ್ನು ಬಳಸಬಾರದು. ಪಟಾಕಿ ವ್ಯಾಪಾರಸ್ಥರು ತಮ್ಮ ಅಂಗಡಿ ಸುತ್ತ ಮುಂಜಾಗ್ರತೆಯಾಗಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಣ್ಣ ಅವಘಡಗಳೂ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು.  ಹಬ್ಬದ ಹೆಸರಿನಲ್ಲಿ ಲಕ್ಕಿ ಡ್ರಾ, ಉಡುಗೊರೆ ಮತ್ತಿತರ ಆಮಿಷದ ನೆಪವೊಡ್ಡಿ ಆನ್‌ಲೈನ್ ವಂಚನೆ ಮಾಡುವವರು ಇರುತ್ತಾರೆ. ಅಂತಹವರ ಬಗ್ಗೆ ಎಚ್ಚರ ವಹಿಸಬೇಕು.  ಹಬ್ಬದ ಆಚರಣೆಯ ವೇಳೆ ಅಕ್ಕಪಕ್ಕದವರಿಗೆ ತೊಂದರೆ ನೀಡುವಂತಹ ಧ್ವನಿವರ್ಧಕ, ತಡರಾತ್ರಿ ಮೋಜು ಮಸ್ತಿಯ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡುವುದಕ್ಕೆ ಆಸ್ಪದ ಮಾಡಿಕೊಡಬಾರದು.  ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ, ಧಾರ್ಮಿಕ ನಿಂದನೆ, ಸುಳ್ಳುಸುದ್ದಿ ಹರಡುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಪೋಸ್ಟ್ ಹಾಕಬಾರದು, ಅಂಥ ಬೆಳವಣಿಗೆಗಳು ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಜಿಲ್ಲೆಯಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಹಬ್ಬವನ್ನು ಆಚರಿಸಬೇಕು. ಮನೆಗಳಲ್ಲಿ ಪೂಜೆ ಸಮಯದಲ್ಲಿ ಆಭರಣಗಳನ್ನು ಬಳಸಿದಾಗ ಹಾಗೂ ಆಭರಣಗಳನ್ನು ಧರಿಸಿ ಬೀದಿಗಳಲ್ಲಿ ಸಂಚರಿಸುವಾಗ ಸರಗಳ್ಳರ ಬಗ್ಗೆ ಎಚ್ಚರ ವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ...    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net