

ದಾವಣಗೆರೆ : ಜಿಲ್ಲೆಯಲ್ಲಿ 2021 ರಿಂದ 2025 ರ ವರೆಗೆ 497 ಮಕ್ಕಳು ಕಾಣೆಯಾದ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 478 ಕೇಸ್ ಪತ್ತೆಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು. ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ, ಕಾಣೆಯಾದ ಮಕ್ಕಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಇನ್ನೂ 19 ಪ್ರಕರಣಗಳು ಬಾಕಿ ಇವೆ. ಚನ್ನಗಿರಿ, ಹೊನ್ನಾಳಿಯಲ್ಲಿ ಅತಿ ಹೆಚ್ಚು ಕಾಣೆಯಾದ ಪ್ರಕರಣಗಳು ಬಾಕಿ ಇರುವುದರಿಂದ ಅವರಿಗೆ ನೋಟೀಸ್ ನೀಡುವಂತೆ ತಿಳಿಸಿದರು. ಪೋಕ್ಸೊ ಬಗ್ಗೆ ಭಯಭೀತರಾಗಿ ಸಾರ್ವಜನಿಕರು ಪೊಲೀಸರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ನಾವು ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಸಮಸ್ಯೆ ಬಗೆಹರಿಸುತ್ತೇವೆ ಎಂಬ ಭರವಸೆಯನ್ನು ನೀಡಿದರು. ಮಕ್ಕಳು ಆರೋಗ್ಯವಂತರಾಗಿರುವುದರ ಜತೆಗೆ ಸುರಕ್ಷಿತವಾಗಿರಬೇಕು. ಸಣ್ಣ ವಯಸ್ಸಿನಲ್ಲಿ ತಂದೆ, ತಾಯಿ ಹಾಗೂ ಪಾಲಕರ ಅಗತ್ಯವಿರುವ ಕಾರಣ ಕಾಣೆಯಾದ ಮಕ್ಕಳನ್ನು ಶೀಘ್ರವಾಗಿ ಪತ್ತೆಹಚ್ಚುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳು ದೇಶದ ಆಸ್ತಿ. ಅವರ ಸಮಸ್ಯೆ, ನ್ಯೂನತೆಗಳನ್ನು ಪರಿಹರಿಸುವ ಮೂಲಕ ರಕ್ಷಣೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಮಕ್ಕಳಿಗೆ ಅನ್ಯಾಯವಾಗುತ್ತಿದ್ದಲ್ಲಿ ನ್ಯಾಯ ಕೊಡಿಸುವ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಎಂದರು. ಕಾಣೆಯಾದ ಮಕ್ಕಳ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಯಾರೂ ಮಾಡಬಾರದು. ಪ್ರತಿ ತಿಂಗಳು ಸಭೆ ಕರೆದು ಜಿಲ್ಲೆಯಲ್ಲಿ ದಾಖಲಾದ ಮಕ್ಕಳ ಅಪಹರಣ ಪ್ರಕರಣಗಳನ್ನು ಗಮನಿಸಬೇಕು. ಕಾಣೆಯಾದ ಮಕ್ಕಳ ಪಾಲಕರನ್ನು ಕರೆದು ನೀಡಲಾದ ದೂರಿಗೆ ಹೆಚ್ಚಿನ ಮಾಹಿತಿ ನೀಡುವಂತೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಪತ್ತೆ ಹಚ್ಚಲು ಸಾಧ್ಯವಾಗದ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಹೇಳಿದರು. ಹೆಚ್ಚುವರಿ ಎಸ್ಪಿ ಪರಮೇಶ್ವರ್ ಎಚ್. ಹೆಗಡೆ, ಡಿವೈಎಸ್‌ಪಿ ಶರಣಬಸಪ್ಪ, ಮಕ್ಕಳ ರಕ್ಷಣಾಧಿಕಾರಿ ಕವಿತಾ ಇದ್ದರು.