

ದಾವಣಗೆರೆ : ಅನೇಕ ರಾಜ್ಯಗಳಿಗೆ ಪೊಲೀಸ್ ಧ್ವಜ ಇಂದಿಗೂ ಸಿಕ್ಕಿಲ್ಲ. ಆದರೆ ನಮಗೆ ಅದು ಸಿಕ್ಕಿರುವುದು ಕರ್ನಾಟಕದ ಹಿರಿಮೆ ಎಂದು ಪೂರ್ವ ವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ ಹೇಳಿದರು. ನಗರದ ಕವಾಯತು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪೊಲೀಸ್ ಧ್ವಜ ದಿನಾಚರಣೆ ಕರ್ನಾಟಕ ಪೊಲೀಸ್ ಇಲಾಖೆಗೆ ಅತ್ಯಂತ ಮಹತ್ವದ ದಿನ ಎಂದು ತಿಳಿಸಿದರು. ನಿವೃತ್ತ ಮತ್ತು ಸೇವೆಯಲ್ಲಿರುವ ಪೊಲೀಸರ ಕಲ್ಯಾಣವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪೊಲೀಸ್ ಧ್ವಜ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಸಾರ್ವಜನಿಕರಲ್ಲಿ ಪೊಲೀಸ್ ಸೇವೆಯ ಕುರಿತು ಅರಿವು ಮೂಡಿಸುವುದು, ಪೊಲೀಸ್ ಕಲ್ಯಾಣದಲ್ಲಿ ಸಾರ್ವಜನಿಕರೂ ಭಾಗವಹಿಸುವುದು, ಪೊಲೀಸರ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂಬುದು ಈ ದಿನದ ಉದ್ದೇಶವಾಗಿದೆ ಎಂದರು. ವರ್ಷ ಪೂರ್ತಿ ಮೈಯೆಲ್ಲ ಕಣ್ಣಾಗಿ ಕಾರ್ಯ ನಿರ್ವಹಿಸಬೇಕಿರುವುದು ಪೊಲೀಸರ ಜವಾಬ್ದಾರಿಯಾಗಿದೆ. ಅದರ ನಿರ್ವಹಣೆಯಲ್ಲಿ ಪೊಲೀಸರು ತಮ್ಮ ಕುಟುಂಬವನ್ನು, ಆರೋಗ್ಯವನ್ನು, ವೈಯಕ್ತಿಕ ಇಚ್ಛೆಗಳನ್ನು ಬದಿಗಿಡಬೇಕಾದ ಸಂದರ್ಭದಲ್ಲಿ ಸಮಾಜ ನಮ್ಮ ಜತೆಗಿರಬೇಕೆನ್ನುವುದು ನಮ್ಮ ನಿರೀಕ್ಷೆಯಾಗಿರುತ್ತದೆ. ಇದನ್ನು ಜ್ಞಾಪಿಸುವುದು ಈ ಆಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು. ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಪೊಲೀಸ್ ಅಧಿಕಾರಿಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ಮುಂದಿನ ಪೀಳಿಗೆಯ ಪೊಲೀಸರು ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳ ಅನುಭವವನ್ನು ಕೇಳಿ ತಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು. ನಿವೃತ್ತ ಪೊಲೀಸರು ತಮ್ಮ ಯಾವುದೇ ಕಷ್ಟಗಳಿದ್ದರೂ ಹಿಂಜರಿಕೆ ಇಲ್ಲದೇ ನಮ್ಮ ಜತೆಗೆ ಹಂಚಿಕೊಳ್ಳಬೇಕು, ಪೊಲೀಸ್ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಅಂಜಿನಪ್ಪ ಮಾತನಾಡಿ, ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವ ಮೂಲಕ ಪೊಲೀಸರ ಕರ್ತವ್ಯದ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು. ಹಿರಿಯ ಅಧಿಕಾರಿಗಳಿಗೆ ಗೌರವ ಕೊಡುವುದು, ಮೇಲಧಿಕಾರಿಗಳ ಆದೇಶವನ್ನು ಪಾಲನೆ ಮಾಡುವುದು, ಠಾಣೆಯಲ್ಲಿ ನಿಯೋಜಿಸಿದ ಕರ್ತವ್ಯಗಳನ್ನು ಉತ್ತಮವಾಗಿ ಮಾಡುವ ಗುಣಗಳನ್ನು ಪೊಲೀಸರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ನ್ಯಾಮತಿ ಬ್ಯಾಂಕ್ ದರೋಡೆಕೋರರನ್ನು ಹೆಡೆಮುರಿ ಕಟ್ಟಿ ಜನರ ಸ್ವತ್ತನ್ನು ಕಾಪಾಡಿದ್ದು ಕರ್ನಾಟಕದಲ್ಲೇ ಅತಿ ದೊಡ್ಡ ಸಾಧನೆಯಾಗಿದ್ದು, ಇದರಿಂದಾಗಿ ದಾವಣಗೆರೆ ಪೊಲೀಸರು ಹೆಮ್ಮೆಪಡುವಂತಾಗಿದೆ. ಇಂತಹ ಸಾಧನೆಗಳಿಂದ ಜನರಿಗೆ ಪೊಲೀಸರ ಮೇಲೆ ಗೌರವ ಬರಲಿದೆ ಎಂದರು. ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ಪೊಲೀಸ್ ಧ್ವಜದಿಂದ ಬಂದ ಹಣದಲ್ಲಿ ಶೇ. 50ರಷ್ಟನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ, ಉಳಿದ ಶೇ. 50ರಷ್ಟು ಹಣವನ್ನು ಕೇಂದ್ರದ ಕ್ಷೇಮ ನಿಧಿಗೆ ನೀಡಲಾಗುತ್ತಿದೆ. 2024-25ನೇ ಸಾಲಿನಲ್ಲಿ ಒಟ್ಟು 15 ಪೊಲೀಸ್ ಅಧಿಕಾರಿಗಳು ನಿವೃತ್ತಿ ಹೊಂದಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯ 13 ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದು, ಪೊಲೀಸರು ದಿನದ 24 ಗಂಟೆಗಳು ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಅವರ ಆರೋಗ್ಯ ಬಹಳ ಮುಖ್ಯವಾಗಿದ್ದು, ಹೆಚ್ಚು ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಪೊಲೀಸರಿಗೆ ಸನ್ಮಾನಿಸಲಾಯಿತು. ಎಎಸ್ಪಿ ಮಂಜುನಾಥ್, ನಿವೃತ್ತ ಕಮಾಂಡೆಂಟ್ ಕೃಷ್ಣಪ್ಪ, ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ, ಲೋಕಾಯುಕ್ತ ಉಪ ಅಧೀಕ್ಷಕ ಮಾಲತೇಶ್, ನಿವೃತ್ತ ಪೊಲೀಸ್ ಅಧೀಕ್ಷಕರುಗಳಾದ ಲಿಂಗಾರೆಡ್ಡಿ, ರವಿನಾರಾಯಣ್, ಬಿ.ಬಿ. ಸಕ್ರಿ, ನಿವೃತ್ತ ಡಿವೈಎಸ್ಪಿ ರಜಪೂತ್, ಪ್ರಹ್ಲಾದ್, ಗುರುದತ್ ಇದ್ದರು