

ದಾವಣಗೆರೆ : ಜಿಲ್ಲಾ ಪೊಲೀಸ್ ಹಾಗೂ ದಾವಣಗೆರೆ ವಿವಿ ಎನ್‌ಎಸ್‌ಎಸ್ ವಿಭಾಗದ ಸಹಯೋಗದಲ್ಲಿ ವಿದ್ಯಾರ್ಥಿ ಪೊಲೀಸ್ ಅನುಭವ ಕಲಿಕೆ ಕಾರ್ಯಾಕ್ರಮವನ್ನು ಜಿಲ್ಲೆಯ 5 ಪೊಲೀಸ್ ಠಾಣೆಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಭಾಗವಾಗಿ ಗುರುವಾರ ಸ್ಪೆಲ್ ಪ್ರಶಿಕ್ಷಣಾರ್ಥಿಗಳು ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ, ಪೊಲೀಸ್ ನಿಸ್ತಂತು ವಿಭಾಗ, ಬೆರಳು ಮುದ್ರೆ ಘಟಕ, 112 ಸಹಾಯವಾಣಿ, ಜಿಲ್ಲಾ ವಿಶೇಷ ವಿಭಾಗ, ತಾಂತ್ರಿಕ ಇನ್ನಿತರ ವಿಭಾಗಗಳಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ಮಾಹಿತಿ ಪಡೆದರು. ನಂತರ ಪೊಲೀಸ್ ಸಭಾಂಗಣದಲ್ಲಿ ಎಸ್ಪಿ ಉಮಾ ಪ್ರಶಾಂತ್ ಅವರು ಸ್ಪೆಲ್ ಪ್ರಶಿಕ್ಷಣಾರ್ಥಿಗಳಿಗೆ ಸ್ಪೆಲ್ ಕಾರ್ಯಕ್ರಮದ ಉದ್ದೇಶ ಹಾಗೂ ಜಿಲ್ಲಾ ಪೊಲೀಸ್ ಕಾರ್ಯವೈಖರಿ ಬಗ್ಗೆ ತಿಳಿಸಿದರು. ಕೇಂದ್ರ ಗೃಹ ಕಾರ್ಯಾಲಯ ಸೂಚನೆ ಮೇರೆಗೆ ಕೇಂದ್ರ ಯುವ ವ್ಯವಹಾರಗಳ ಇಲಾಖೆಯು ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪೊಲೀಸ್ ಅನುಭವದ ಕಲಿಕೆ ಕಾರ್ಯಕ್ರಮ ಜಾರಿಗೆ ತಂದಿದೆ. ವಿದ್ಯಾರ್ಥಿಗಳ ಅರಿವಿನ ಮತ್ತು ಜನರ ಕೌಶಲಗಳನ್ನು ಸುಧಾರಿಸುವ ಉದ್ದೇಶದಿಂದ ಪೊಲೀಸ್ ಠಾಣೆಗಳಲ್ಲಿ ಪದವಿ ವಿದ್ಯಾರ್ಥಿಗಳಿಗೆ 30 ದಿನಗಳ ಅನುಭವದ ಕಲಿಕೆಯನ್ನು ಒದಗಿಸಲಾಗುತ್ತದೆ. ಪ್ರಮುಖ ಅಪರಾಧ ಕಾನೂನುಗಳು ಮತ್ತು ಕಾರ್ಯ ವಿಧಾನಗಳು, ಅಪರಾಧ ತನಿಖೆಯ ಮೂಲಗಳು, ಸಂಚಾರ ನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತದೆ. ವ್ಯವಸ್ಥಿತ ಆಯ್ಕೆ ಮತ್ತು ತರಬೇತಿ ಪ್ರಕ್ರಿಯೆಯ ಮೂಲಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇಂಟರ್ನ್‌ಗಳಾಗಿ ನಿಯೋಜಿಸುವ ಮೂಲಕ ಕಾನೂನು ಸುವ್ಯವಸ್ಥೆ ಮತ್ತು ಸಾಮಾನ್ಯ ಪೊಲೀಸಿಂಗ್ ಬಗ್ಗೆ ತರಬೇತಿ ನೀಡಲಾಗುತ್ತದೆ. ಜಿಲ್ಲೆಯ ಬಡಾವಣೆ, ವಿದ್ಯಾನಗರ, ಸಂತೇಬೆನ್ನೂರು, ಹೊನ್ನಾಳಿ, ಹರಿಹರ ನಗರ ಪೊಲೀಸ್ ಠಾಣೆಗಳಲ್ಲಿ ವಿದ್ಯಾರ್ಥಿ ಪೊಲೀಸ್ ಅನುಭವ ಕಲಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ್, ಜಿ. ಮಂಜುನಾಥ ಹಾಗೂ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಬಿ.ಎಸ್. ಬಸವರಾಜ, ಸ್ಪೆಲ್ ಕಾರ್ಯಕ್ರಮದ ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸಂಯೋಜಕರು, ಪೊಲೀಸ್ ಸಿಬ್ಬಂದಿ ಇದ್ದರು.