

ದಾವಣಗೆರೆ : ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ್ ಎಂ. ಸಂತೋಷ್ ಹೇಳಿದರು. ಇಲ್ಲಿನ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ತಾಳ್ಮೆ, ಛಲ, ಪರಿಶ್ರಮ ಬಹಳ ಮುಖ್ಯ ಎಂದು ತಿಳಿಸಿದರು. ಕ್ರೀಡೆಗಳು ವ್ಯಕ್ತಿತ್ವ ನಿರ್ಮಾಣದ ಜತೆಗೆ ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಪಾಲಕರು ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆ ಜತೆಗೆ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದರು. ಬೆಳಗ್ಗೆ ನಡೆದ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಗೋವಿಂದ ಸ್ವಾಮಿ ಮಾತನಾಡಿ, ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಬೇಕಾದರೆ ಅವರಿಗೆ ಕಠಿಣ ಪರಿಶ್ರಮ, ಸಂಕಲ್ಪ ಬಲ ಮತ್ತು ಅರ್ಪಣಾ ಮನೋಭಾವಗಳು ಮುಖ್ಯ, ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ ಎಂಬುದನ್ನು ತಿಳಿಸಿದರು. ಡಿಎಆರ್ ಡಿವೈಎಸ್‌ಪಿ ಪಿ.ಬಿ. ಪ್ರಕಾಶ್ ಮಾತನಾಡಿ, ಜಗತ್ತಿನಲ್ಲಿ ಸೋಲದೇ ಗೆದ್ದವರು ಯಾರೂ ಇಲ್ಲ. ಹಾಗಾಗಿ ಸೋಲನ್ನು ಸ್ಫೂರ್ತಿದಾಯಕವಾಗಿ ತೆಗೆದುಕೊಳ್ಳಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು. ವಿದ್ಯಾರ್ಥಿಗಳಿಗಾಗಿ 76 ವಿವಿಧ ರೀತಿಯ ಆಟೋಟಗಳನ್ನು ಆಯೋಜಿಸಲಾಗಿತ್ತು. ಶಾಲೆಯ ನೇತ್ರಾವತಿ ತಂಡದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದರು. ಕಾವೇರಿ ತಂಡದ ಮಕ್ಕಳು ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು. ಶಾಲೆಯ ಪ್ರಾಚಾರ್ಯ ಯತೀಶ್ ಆಚಾರ್, ದೈಹಿಕ ಶಿಕ್ಷಕ ಹಾಲೇಶ್ ಮಾರ್ಗದರ್ಶನದಲ್ಲಿ ಮಕ್ಕಳು ಕ್ರೀಡಾಕೂಟದಲ್ಲಿ ಸಾಧನೆ ತೋರಿದರು. ಕೌಸರ್ ಬಾನು, ದೀಪಾ, ಶಿಲ್ಪಾ ಮತ್ತು ಸುಗಾರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.