

ಜಗಳೂರು : ಪೊಲೀಸ್ ಠಾಣೆಗೆ ಭೇಟಿ, ಪರಿಶೀಲನೆ ವಿಜಯವಾಣಿ ಸುದ್ದಿಜಾಲ ಜಗಳೂರು ರಾಜ್ಯದಲ್ಲಿ ಆನ್‌ಲೈನ್ ವಂಚನೆ ಮತ್ತು ಮಾದಕ ದ್ರವ್ಯ ಸೇವನೆ ಪ್ರಕರಣಗಳು ಹೆಚ್ಚುತ್ತಿದ್ದು, ಪಾಲಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೂರ್ವ ವಲಯ ಐಜಿಪಿ ರಮೇಶ್ ಬಾನೂತ್ ಹೇಳಿದರು. ವಾರ್ಷಿಕ ಪರಿವೀಕ್ಷಣೆ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಆನ್‌ಲೈನ್‌ನಲ್ಲಿ ಹಣ ದ್ವಿಗುಣದ ಸಂದೇಶ ಕಳಿಸಿ ವಂಚಿಸಲಾಗುತ್ತಿದೆ. ಇದಕ್ಕೆ ಬಹುತೇಕ ವಿದ್ಯಾವಂತರು, ಸಿರಿವಂತರೇ ಬಲಿಯಾಗುತ್ತಿದ್ದಾರೆ. ಹಣ ಕಳೆದುಕೊಂಡ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿದರೆ ಹಣ ಡ್ರಾ ತಡೆ ಹಿಡಿಬಹುದು ಎಂದರು. ದಾವಣಗೆರೆ ಜಿಲ್ಲೆಯಲ್ಲಿ ಜಗಳೂರು ತಾಲೂಕಿನಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಿದೆ. ಇಲ್ಲಿನ ಇನ್‌ಸ್ಪೆಕ್ಟರ್ ಶ್ರೀನಿವಾಶರಾವ್ ಮತ್ತು ಸಿಬ್ಬಂದಿ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಅದು ಬಿಟ್ಟರೆ ಕೊಲೆ, ಕಳ್ಳತನ ಮತ್ತಿತರ ಅಪರಾಧಗಳು ಇಲ್ಲಿ ಕಡಿಮೆಯಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಪಟ್ಟಣ ಬೆಳೆದಂತೆ ಜನ ಸಂಖ್ಯೆ ಹೆಚ್ಚುತ್ತಿದೆ. ಸಿಬ್ಬಂದಿ ಕೊರತೆ ಬಗ್ಗೆ ಗಮನಕ್ಕೆ ಬಂದಿದ್ದು, ಪರಿಶೀಲಿಸುತ್ತೇವೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು. ಜಗಳೂರು ತಾಲೂಕಿನಲ್ಲಿ ಗಾಂಜಾ ಮಾರಾಟ ದಂಧೆ ಇಲ್ಲ. ಇದ್ದ ಕಡೆಗಳಲ್ಲಿ ಸ್ಥಳೀಯ ಪೊಲೀಸರು ನಿಯಂತ್ರಣಕ್ಕೆ ತಂದಿದ್ದಾರೆ. ಸಿಪಿಐ ಶ್ರೀನಿವಾಸ್‌ರಾವ್ ಶಾಲಾ ಕಾಲೇಜುಗಳಲ್ಲಿ ‘ತೆರೆದ ಮನೆ’ ಕಾರ್ಯಕ್ರಮದ ಮೂಲಕ ಪೋಕ್ಸೋ ಪ್ರಕರಣ, ಡ್ರಗ್ಸ್ ದಂಧೆ ಮತ್ತು ಅವುಗಳ ನಿಯಂತ್ರಣ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. ಪೊಲೀಸ್ ಠಾಣೆಗೆಯಲ್ಲಿ ಸಿಬ್ಬಂದಿ ಸಿಬ್ಬಂದಿ ಹೆಚ್ಚಿಸಬೇಕಿದೆ. ಆಸ್ಪತ್ರೆ, ಬಸ್‌ನಿಲ್ದಾಣಗಳಲ್ಲಿ ಸಿಬ್ಬಂದಿ ಹಾಕುವುದು ಅನಿರ್ವಾಯವಿದೆ. ಪಟ್ಟಣದ ಹೊರಭಾಗ ಮತ್ತು ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿ ಮಾಲೀಕರು ಸಿಸಿಟಿವಿ ಅಳವಡಿಸಿಕೊಳ್ಳಬೇಕು. ಇದರಿಂದ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ಸಲೀಸಾಗುತ್ತದೆ. ಈ ಕುರಿತು ತಕ್ಷಣವೇ ಅಂಗಡಿ ಮಾಲೀಕರ ಸಭೆ ಕರೆದು ಸೂಚನೆ ನೀಡುವಂತೆ ತಿಳಿಸಿದರು. ದಾವಣಗೆರೆ ಗ್ರಾಮಾಂತರ ಡಿಎಸ್‌ಪಿ ಬಿ.ಎಸ್. ಬಸವರಾಜ್, ಎಂ. ಶ್ರೀನಿವಾಸ್‌ರಾವ್ ಇದ್ದರು.