

ದಾವಣಗೆರೆ : ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆ ಸಂಬಂಧ ಬಂಧಿತರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ವ್ಯಾಪಕ ಪೊಲೀಸ್ ಬಂದೋಬಸ್ತ್ ನಡುವೆ ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಇದುವರೆಗೆ 6 ಪ್ರಕರಣ ದಾಖಲಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಇನ್ನೂ ಹಲವರ ವಿಚಾರಣೆ ನಡೆಸಲಾಗುತ್ತಿದೆ. ಅಮಾಯಕರನ್ನು ಬಂಧಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದ್ದು ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ. ಸುಮಾರು 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪಿಕೆಟಿಂಗ್ ನಡೆಸಲಾಗುತ್ತಿದೆ. ವಲಯವಾರು ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಿನದ 24 ಗಂಟೆ ಪೊಲೀಸರು ಗಸ್ತು ಮಾಡುತ್ತಿದ್ದಾರೆ. ಕೆಎಸ್‌ಆರ್‌ಪಿ ಮತ್ತು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಶನಿವಾರ ಇಲ್ಲಿನ ಬಸವನಗರ ಪೊಲೀಸ್ ಠಾಣೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಅವರನ್ನು ಭೇಟಿ ಮಾಡಿ ಅಮಾಯಕರನ್ನು ಬಂಧಿಸದಂತೆ ಮನವಿ ಮಾಡಿದರು. ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಇನ್ನಿತರ ಮುಖಂಡರು ಇದ್ದರು. ... (ಬಾಕ್ಸ್) ಅಮಾಯಕರನ್ನು ಬಂಧಿಸಿಲ್ಲ ಕಲ್ಲು ತೂರಾಟ ಘಟನೆ ಸಂಬಂಧ ಸಾಕ್ಷಾೃಧಾರಗಳನ್ನು ಗಮನಿಸಿ ಕ್ರಮ ತೆಗೆದುಕೊಳ್ಳಲಾಗಿದೆ. ಅಮಾಯಕರನ್ನು ಬಂಧಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಪಷ್ಟಪಡಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಜಿ, ಎಡಿಜಿಪಿ, ಐಜಿಪಿ ಸೇರಿದಂತೆ ಹಿರಿಯ ಅಧಿಕಾರಿಗಳ ನಿರ್ದೇಶನದ ಪ್ರಕಾರ, ಅಮಾಯಕರನ್ನು ಬಂಧಿಸದಂತೆ ನಮ್ಮ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸದ್ಯದಲ್ಲೇ ಶಾಂತಿ ಸಭೆ ಕರೆಯಲಾಗುವುದು ಎಂದು ಹೇಳಿದರು. ನಗರದಲ್ಲಿ ಉಳಿದ ಗಣೇಶ ಮೂರ್ತಿಗಳ ವಿಸರ್ಜನೆಗೆ ಎಂದಿನಂತೆ ಅವಕಾಶ ಮಾಡಿಕೊಡಲಾಗುವುದು. ಸದ್ಯಕ್ಕೆ ಡಿಜೆ ಬಳಸಲು ಅನುಮತಿ ನೀಡಿಲ್ಲ, ಪರಿಸ್ಥಿತಿ ನೋಡಿಕೊಂಡು ಮುಂದೆ ನಿರ್ಧಾರ ಕೈಗೊಳ್ಳಲಾಗುವುದು. ಮಲೇಬೆನ್ನೂರು, ಚನ್ನಗಿರಿ ಮತ್ತು ಹೊನ್ನಾಳಿಯಲ್ಲೂ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದ್ದು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪ್ರಚೋದನಾಕಾರಿ ಹೇಳಿಕೆ ನೀಡಿದವರಿಗೆ ನೋಟಿಸ್ ನೀಡಿ, ಕರೆದು ವಿಚಾರಣೆ ನಡೆಸಲಾಗಿದೆ. ಘಟನೆಯಲ್ಲಿ ಮಕ್ಕಳೂ ಪಾಲ್ಗೊಂಡಿರುವುದು ಗಮನದಲ್ಲಿದೆ ಎಂದರು. ಅಹಿತಕರ ಘಟನೆಗಳು ನಡೆಯದಂತೆ ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತ್ ಮುಂದುವರಿಸಲಾಗಿದೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್‌ಗಳನ್ನು ಹಾಕಬಾರದು. ಏನಾದರೂ ವಿಷಯವಿದ್ದರೆ ಪೊಲೀಸರ ಗಮನಕ್ಕೆ ತರಬೇಕು ಎಂದು ಹೇಳಿದರು.