

ದಾವಣಗೆರೆ : ಬೇರೆಯವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಈದ್ ಮಿಲಾದ್ ಹಾಗೂ ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು. ನಗರದಲ್ಲಿ ಶುಕ್ರವಾರ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಈದ್ ಮಿಲಾದ್ ಮತ್ತು ಗಣೇಶ ಹಬ್ಬದ ಶಾಂತಿ ಸೌಹಾರ್ದ ಸಭೆಯಲ್ಲಿ ಮಾತನಾಡಿ, ನಾವೆಲ್ಲರೂ ಭಾರತೀಯರಾಗಿದ್ದು, ಇಲ್ಲಿನ ಸಂಸ್ಕೃತಿಗಳಿಗೆ ಬೆಲೆ ಕೊಡಬೇಕು. ಪ್ರತಿಯೊಬ್ಬರಿಗೂ ಅವರದೇ ಆದ ಸ್ವಾತಂತ್ರೃವಿದೆ. ಆದರೆ ಅದು ಸ್ವೇಚ್ಛಾಚಾರವಾಗಬಾರದು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಸಹಾಯ ಬೇಕಿದ್ದರೆ 112 ಮೂಲಕ ಪೊಲೀಸರಿಗೆ ಕರೆ ಮಾಡಿ ಎಂದರು. ನಿಗದಿಪಡಿಸಿದ ರಸ್ತೆಗಳಲ್ಲೇ ಸಾಗಿ, ನಿಗದಿತ ಸ್ಥಳಗಳಲ್ಲೇ ಗಣೇಶ ವಿಸರ್ಜನೆಯನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಗಣೇಶ ವಿಸರ್ಜನೆ ಮೆರವಣಿಗೆಯ ಮಾರ್ಗವನ್ನು ಬದಲಾಯಿಸಬಾರದು. ಸೂಕ್ಷ್ಮ ಪ್ರದೇಶದಲ್ಲಿ ಬೇಕಾಬಿಟ್ಟಿ ವರ್ತಿಸಬಾರದು. ಪೊಲೀಸರ ಸೂಚನೆಯಂತೆ ನಡೆದುಕೊಳ್ಳುವ ಮೂಲಕ ಶಾಂತಿ, ಸೌಜನ್ಯಯುತವಾಗಿ ಸಡಗರ, ಸಂಭ್ರಮದಿಂದ ಹಬ್ಬ ಆಚರಿಸಿ ಎಂದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಇದ್ದರು.