ರಾಜಕೀಯ ಸಂವೇದನೆಯ ಕಾವ್ಯ ಅಗತ್ಯ

dvg-Satish-Kulkarni.jpg
Published on

ದಾವಣಗೆರೆ : ರಾಜಕೀಯ ಸಂವೇದನೆಯ ಕಾವ್ಯಗಳ ರಚನೆಯ ಅಗತ್ಯವಿದೆ ಎಂದು ಹಿರಿಯ ಕವಿ ಸತೀಶ್ ಕುಲಕರ್ಣಿ ಹೇಳಿದರು.  ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆರಂಭವಾದ ರಾಷ್ಟ್ರೀಯ ಅಕ್ಷರ ಹಬ್ಬದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಮಾತನಾಡಿದರು.  ಪ್ರಭುತ್ವದ ದಬ್ಬಾಳಿಕೆಯನ್ನು ಪ್ರಶ್ನಿಸಬೇಕು. ಕೋಮುವಾದದ ವಿರುದ್ಧ ಧ್ವನಿ ಎತ್ತಬೇಕು. ಮಾತಿನಿಂದ ಮರುಳು ಮಾಡುವ ಸೋಗಲಾಡಿತನವನ್ನು ಎದುರಿಸುವ ಕಾವ್ಯ ಬೇ ಕು ಎಂದು ತಿಳಿಸಿದರು.  ಕಾವ್ಯವು ಕೆನೆಯಂತೆ ಸೂಕ್ಷ್ಮವಾದುದು. ಅದರ ರಚನೆ ಗಂಭೀರವಾದ ಪ್ರಕ್ರಿಯೆ. ಕವನವು ಸಮಾಜವನ್ನು ನೋಡುವ ಕಣ್ಣಾಗಿದೆ. ಅದಕ್ಕೆ ಪ್ರಯೋಗಶೀಲತೆ ಇರಬೇಕು ಎಂದು ಅಭಿಪ್ರಾಯಪಟ್ಟರು.  ಕಾವ್ಯದಲ್ಲಿ ದಿಟ್ಟತನ, ಜೀವಕಳೆ ಇರಬೇಕು. ಕಾವ್ಯ ಓದುವುದೂ ಒಂದು ಕಲೆಯೇ ಆಗಿದೆ. ಸಾಹಿತ್ಯದಲ್ಲಿ ಸಹನೆಯ ಗುಣ ಇರಬೇಕು ಎಂದು ಹೇಳಿದರು.  ಸಾಹಿತ್ಯಾಸಕ್ತರ ಅಪೇಕ್ಷೆಯಂತೆ ಸತೀಶ್ ಕುಲಕರ್ಣಿ ಅವರು ತಾವು ರಚಿಸಿದ ‘ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವ. ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟುತೇವ, ನಾವು ಕನಸು ಕಟ್ಟುತೇವ, ಮನಸು ಕಟ್ಟುತೇವ’ ಗೀತೆಯನ್ನು ಹಾಡಿ ರಂಜಿಸಿದರು. ನಾಡಿನ ವಿವಿಧೆಡೆಯಿಂದ ಬಂದಿದ್ದ ಕವಿಗಳು ಸ್ವರಚಿತ ಕವನಗಳನ್ನು ವಾಚನ ಮಾಡಿದರು.  ಇದಕ್ಕೂ ಮೊದಲು ನಡೆದ ಕಥಾ ಸಮಯದಲ್ಲಿ ಕೇಶವರೆಡ್ಡಿ ಹಂದ್ರಾಳ, ಶ್ರೀದೇವಿ ಕಳಸದ, ಆನಂದ ಋಗ್ವೇದಿ, ರಾಜಿ ತಾಹಿರ್, ಮುದಿರಾಜ ಬಾಣದ, ರೇಣುಕಾ ಕೊಡಗುಂಟಿ ಭಾಗವಹಿಸಿದ್ದರು. ಶರಣಬಸವ ಕೆ. ಗುಡದಿನ್ನಿ ನಿರ್ವಹಣೆ ಮಾಡಿದರು. ಕೆ.ಸಿ. ಶೃತಿ ಕನ್ನಡ ಅನುವಾದ ಓದಿದರು. ರಂಗ ಸಮಯದಲ್ಲಿ ರಂಗಕರ್ಮಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net