ಸಾಮಾಜಿಕ ಬದುಕಿಗೆ ಸಾಹಿತ್ಯ ನೆಮ್ಮದಿ ತರಲಿ

DVG-KVIGOSTI-6_20241007011026575.jpg
Published on

ದಾವಣಗೆರೆ :  ಸಾಹಿತ್ಯ ಸಮಾಜದ ಧ್ವನಿಯಾಗುವ ಮೂಲಕ ಜನರ ಬದುಕಿಗೆ ನೆಮ್ಮದಿ ತಂದುಕೊಡಬೇಕು ಎಂದು ನ್ಯಾಯವಾದಿ ಕೆ. ದಾದಾಪೀರ್ ಹೇಳಿದರು.  ದಸರಾ ಹಬ್ಬದ ಪ್ರಯುಕ್ತ ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಹುಭಾಷಾ ಚುಟುಕು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ರವಿ ಕಾಣದ್ದನ್ನು ಕವಿ ಕಂಡ... ಎನ್ನುವಂತೆ ಕವಿಗೆ ಒಳಗಣ್ಣಿನಿಂದ ಎಲ್ಲವನ್ನೂ ಗ್ರಹಿಸುವ ಶಕ್ತಿ ಇರುತ್ತದೆ. ಅದು ಸಾಹಿತ್ಯದ ಮೂಲಕ ಬೆಳಕಾಗಬೇಕು ಎಂದು ತಿಳಿಸಿದರು.  ಸಾಹಿತಿ ಕೆ.ಎಸ್.ವೀರಭದ್ರಪ್ಪ ತೆಲಗಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಭಾವೈಕ್ಯತೆ ಮತ್ತು ಸಾಮರಸ್ಯ ಬೇಕಾಗಿದೆ. ಅದರ ಪ್ರತೀಕವಾಗಿ ಬಹುಭಾಷಾ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದರು.  ಕವಿಗೆ ಬ್ರಹ್ಮನಿಗೂ ಮೀರಿದ ಒಳ ಕಣ್ಣೋಟ ಇರುತ್ತದೆ. ಅದಕ್ಕೆ ಕವಿ ಸಾಮಾಜಿಕವಾಗಿ ತುಡಿಯಬೇಕು. ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಆಶಿಸಿದರು.  ಚುಸಾಪ ತಾಲೂಕು ಅಧ್ಯಕ್ಷ ಬಿ. ಮಹಾಂತೇಶ್ ಬಿ. ನಿಟ್ಟೂರು ಆಶಯ ನುಡಿಗಳನ್ನಾಡಿ, ಸಾಹಿತ್ಯ ಎನ್ನುವುದು ಸಮಾಜದ ಹಿತ ಕಾಪಾಡುವುದು, ಇದು ನಿಂತ ನೀರಾಗದೆ ಸದಾ ಚಲನಶೀಲವಾಗಿರಬೇಕು ಎಂದು ತಿಳಿಸಿದರು.  ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಜಿ.ಎಚ್,ರಾಜಶೇಖರ ಗುಂಡಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸ್ಪೂರ್ತಿ ಪ್ರಕಾಶನ ತೆಲಗಿ ಅಧ್ಯಕ್ಷ ಎಂ. ಬಸವರಾಜ್, ಗೌರವ ಸಲಹೆಗಾರರಾದ ಸಂಧ್ಯಾ ಸುರೇಶ್ ಇತರರು ಇದ್ದರು.  ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ,  ವಚನ ಸಾಹಿತ್ಯ ಪರಿಷತ್, ಸ್ಫೂರ್ತಿ ಪ್ರಕಾಶನ, ನಿಟ್ಟೂರು ಬಜ್ಜಿ ಹನುಮಂತಪ್ಪ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ 30ಕ್ಕೂ ಹೆಚ್ಚು ಕವಿಗಳು ಕನ್ನಡ, ಹಿಂದಿ, ಇಂಗ್ಲೀಷ್, ತುಳು, ಕೊಂಕಣಿ ಭಾಷೆಯ ಕವಿತೆಗಳನ್ನು ವಾಚಿಸಿದರು.  ಚುಸಾಪ ಕಾರ್ಯದರ್ಶಿ ಕೆ.ಪಿ.ತಾರೇಶ್ ಅಣಬೇರು ಸ್ವಾಗತಿಸಿದರು. ಸುನಿತಾ ಪ್ರಕಾಶ್ ಹಾಗೂ ಲಲಿತ್‌ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು, ಉಮಾದೇವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net