ಹಸಿರು ಭೂಮಿಗಾಗಿ ಪ್ಲಾಸ್ಟಿಕ್ ತ್ಯಜಿಸಿ

dvg-plastic.jpg
Published on

ದಾವಣಗೆರೆ : ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸುವ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಹಸಿರು ಭೂಮಿಗಾಗಿ ಇದು ನಮ್ಮ ಹೊಣೆಗಾರಿಕೆಯಾಗಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿರುವ ಎಸ್‌ಎಸ್ ಕೇರ್ ಟ್ರಸ್ಟ್ ಕಚೇರಿಯಲ್ಲಿ ಶುಕ್ರವಾರ ನಡೆದ, ಪ್ಲಾಸ್ಟಿಕ್ ಮರುಬಳಕೆ ಯಂತ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ತ್ಯಾಜ್ಯ ಪ್ಲಾಸ್ಟಿಕ್ ಮರುಬಳಕೆ ಮಾಡಬಹುದಾದ ವಸ್ತುವಾಗಿ ಪರಿವರ್ತಿಸುವ ಈ ಆಧುನಿಕ ಸಾಧನದಿಂದ ಪರಿಸರ ಸಂರಕ್ಷಣೆ, ಸಂಪನ್ಮೂಲ ಉಳಿವು ಸಾಧ್ಯ. ಈಗಿರುವ ಪ್ಲಾಸ್ಟಿಕ್‌ನ ಮರುಬಳಕೆಯಿಂದ ಹೊಸ ಪೆಟ್ರೋಲಿಯಂ ಆಧಾರಿತ ಮೂಲವಸ್ತುಗಳ ಅವಶ್ಯಕತೆ ಕಡಿಮೆಯಾಗುತ್ತಿದ್ದು, ಸಮಯದ ಉಳಿತಾಯಕ್ಕೂ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಇದೇ ವೇಳೆ ಎಸ್‌ಎಸ್ ಕೇರ್ ಟ್ರಸ್ಟ್ ಕಚೇರಿಯಲ್ಲಿ, ವಿದ್ಯಾರ್ಥಿ ಘಟಕದ ಸೃಜನಾತ್ಮಕ ಪ್ರಯತ್ನವಾದ ವಾಲ್ ಆಫ್ ನಾಲೆಡ್ಜ್ನ ಉದ್ಘಾಟನೆ ನೆರವೇರಿಸಲಾಯಿತು.  ಓದಿ, ಹಿಂತಿರುಗಿಸಿ ಅಥವಾ ಹಂಚಿಕೊಳ್ಳಿ ಎಂಬ ಸ್ಫೂರ್ತಿದಾಯಕ ಸಂದೇಶವನ್ನು ಸಾರುವ ಈ ವಿಶಿಷ್ಟ ಜ್ಞಾನದ ಗೋಡೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಲ್ಲಿ ಓದುವ ಹವ್ಯಾಸ ಬೆಳೆಸಲು, ಪುಸ್ತಕ ಹಂಚಿಕೆ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಜ್ಞಾನವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ರೂಪುಗೊಂಡಿದೆ.  ಇದು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಮಾತ್ರವಲ್ಲ, ಸಮಾಜದಲ್ಲಿ ಜ್ಞಾನ ಹಂಚುವ ಮನೋಭಾವವನ್ನು ಬೆಳೆಸಲಿ. ಈ ಮೂಲಕ ಎಲ್ಲರಿಗೂ ಮಾದರಿಯಾಗಲಿ ಎಂದು ತಿಳಿಸಿದರು.  ಪ್ಲಾಸ್ಟಿಕ್ ಮರುಬಳಕೆ ಯಂತ್ರದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನೆರವೇರಿಸಿದರು.  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿ.ಪಂ. ಸಿಇಒ ಗಿತ್ತೆ ಮಾಧವ್ ವಿಠ್ಠಲರಾವ್, ಜೆಜೆಎಂ ಕಾಲೇಜು ಪ್ರಾಚಾರ್ಯೆ ಡಾ. ಶುಕ್ಲಾಶೆಟ್ಟಿ, ಡಾ.ಮೂಗನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net