ಔಷಧ ವಿಜ್ಞಾನದಲ್ಲಿ ನಡೆಯಲಿ ಸಂಶೋಧನೆ

dvg-gmu_20250923235612679.jpg
Published on

ದಾವಣಗೆರೆ : ಫಾರ್ಮಾಸ್ಯೂಟಿಕಲ್ ಸೈನ್ಸ್ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಗಳ ಮೂಲಕ ಹೊಸ ಔಷಧಗಳನ್ನು ಕಂಡುಹಿಡಿದು, ರೋಗ ನಿರೋಧಕ ತಂತ್ರಗಳನ್ನು ಅಭಿವೃದ್ಧಿಪಡಿಸುವ ಹೊಣೆ ನಿಮ್ಮ ಮೇಲಿದೆ ಎಂದು, ಅಹಮದಾಬಾದ್ ಎಡಬ್ಲ್ಯೂಎಲ್ ಅಗ್ರಿ ಬಿಸಿನೆಸ್ ಲಿಮಿಟೆಡ್ ಮುಖ್ಯಸ್ಥ ಡಾ. ವಿದ್ಯಾಶಂಕರ್ ಸತ್ಯಕುಮಾರ್ ಹೇಳಿದರು.  ನಗರದ ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ವತಿಯಿಂದ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 2021-25ನೇ ಸಾಲಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.  ಈ ಕ್ಷೇತ್ರವು ನಮ್ಮ ಆರೋಗ್ಯ ಮತ್ತು ಜನರ ಕಲ್ಯಾಣಕ್ಕೆ ಸಂಬಂಧಿಸಿದೆ. ಇದರಿಂದ ಮಾನವನ ಜೀವಮಾನ ವೃದ್ಧಿ ಮತ್ತು ಗುಣಮಟ್ಟದ ಬದುಕು ಸಾಧಿಸುವ ಸಾಧ್ಯತೆ ಹೆಚ್ಚಾಗುತ್ತದೆ. ನಿಮ್ಮ ಅಧ್ಯಯನದ ಸಮಯದಲ್ಲಿ ಸೈದ್ಧಾಂತಿಕ ಜ್ಞಾನ ಮಾತ್ರವಲ್ಲ, ಪ್ರಾಯೋಗಿಕ ಅನುಭವವನ್ನು ಕೂಡ ಗಮನದಲ್ಲಿ ಇಟ್ಟುಕೊಳ್ಳಿ. ಸತತ ಕಲಿಕೆ ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸುವ ಶಕ್ತಿ ನಿಮ್ಮನ್ನು ಮುಂದಿನ ತಲೆಮಾರಿಗೆ ಮುನ್ನಡೆಸುತ್ತದೆ ಎಂದು ಸಲಹೆ ನೀಡಿದರು.  ಬೆಂಗಳೂರಿನ ಆರ್‌ಜಿಯುಎಚ್‌ಎಸ್ ಫಾರ್ಮಸಿ ವಿಭಾಗದ ಡೀನ್ ಡಾ. ಅಶೋಕ್ ಕುಮಾರ್ ಮಲ್ಪಾನಿ ಮಾತನಾಡಿ, ನಿಮ್ಮ ಕೈಯಲ್ಲಿ ಆರೋಗ್ಯ ಸಂರಕ್ಷಣೆ, ರೋಗ ನಿವಾರಣೆ ಮತ್ತು ಮಾನವ ಬದುಕಿನ ಉತ್ತಮೀಕರಣದ ನೌಕರಿ ಇದೆ. ನಿಮ್ಮ ಸಂಶೋಧನೆಗಳಲ್ಲಿ ಬಾಹ್ಯ ವಿಷಯ ಜ್ಞಾನಿಗಳೊಂದಿಗೆ ಸಹಕಾರ ಮಾಡಿ. ರಸಾಯನ ಶಾಸ್ತ್ರಜ್ಞರು, ಜೀವಶಾಸ್ತ್ರಜ್ಞರು, ವೈದ್ಯರು ಹಾಗೂ ಡೇಟಾ ವಿಜ್ಞಾನಿಗಳೊಂದಿಗೆ ಕೈಜೋಡಿಸಿ. ದೊಡ್ಡ ಕನಸು ಕಾಣಿರಿ ಎಂದು ಕಿವಿಮಾತು ಹೇಳಿದರು.  ಜಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಮಾತನಾಡಿ,  ಫಾರ್ಮಸಿ ವೃತ್ತಿ ವ್ಯಕ್ತಿಯ ಆರೋಗ್ಯ ಮತ್ತು ಬದುಕಿನ ಗುಣಮಟ್ಟ ಹೆಚ್ಚಿಸುವ ಪವಿತ್ರ ಸೇವೆ. ಸರಿಯಾದ ಮನೋಭಾವನೆ ಈ ವೃತ್ತಿಯಲ್ಲಿ ಅತ್ಯಂತ ಅವಶ್ಯಕ. ನಿತ್ಯ ನವೀನತೆ, ವೈಜ್ಞಾನಿಕ ಅಧ್ಯಯನ, ಸತತ ಪರಿಶೀಲನೆ ಅನಿವಾರ್ಯ ಎಂದರು.  ನಿಮ್ಮ ಕೆಲಸದ ಪರಿಣಾಮ ಜನರ ಆರೋಗ್ಯದಲ್ಲಿ ಬೆಳಕನ್ನು ತರಬೇಕು. ನಿಮ್ಮ ಮುಂದೆ ಔಷಧ ತೆಗೆದುಕೊಂಡು ಹೋಗುವವನ ನೋವನ್ನು ಮನಸ್ಸಲ್ಲಿ ಗ್ರಹಿಸಿ, ಔಷಧ ನೀಡುವ ವೇಳೆ ಸಹಾನುಭೂತಿ ಹೊಂದಬೇಕು ಎಂದು ಆಶಿಸಿದರು.  ಜಿಎಂಐಪಿಎಸ್‌ಆರ್ ಪ್ರಾಚಾರ್ಯ ಡಾ. ಗಿರೀಶ್ ಬೋಳಕಟ್ಟಿ, ಡಾ. ಜೆ. ತಿಮ್ಮಾಶೆಟ್ಟಿ, ಡಾ. ಶಿವಕುಮಾರ್ ಸ್ವಾಮಿ, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಪಾಲಕರು ಇದ್ದರು.  ಪ್ರತೀಕ್ಷಾ ಸಿ.ಸಿ ಪ್ರತಿಜ್ಞೆ ಬೋಧಿಸಿದರು. ಡಾ. ಅಮಿತ್ ಕುಮಾರ್ ಬಿ ಹಾಗೂ ಕೇಶವ ಕೆ.ಎಸ್ ಅತಿಥಿಗಳ ಪರಿಚಯಿಸಿದರು. ನಮ್ರತಾ ಎಂ.ಜಿ ಪ್ರಾರ್ಥಿಸಿದರು. ಯೂಸುಫ್ ಮಲ್ಲಿಕ್ ಧಮಾನಿ ಸ್ವಾಗತಿಸಿದರು. ಡಾ. ಮಹಮ್ಮದ್ ಯಾಸಿನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net