

ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಗುರುವಾರ ಒಂದೇ ದಿನ ಇಬ್ಬರು ಮುಖಂಡರು ಮಾತೃ ಪಕ್ಷ ತೊರೆದು ಬೇರೆ ಪಕ್ಷವನ್ನು ಸೇರಿದರು.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಒಂದು ಕಾಲದಲ್ಲಿ ಆಪ್ತರಾಗಿದ್ದ, ನಗರಸಭೆಯ ಮಾಜಿ ಅಧ್ಯಕ್ಷ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವನಳ್ಳಿ ರಮೇಶ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಅದಾದ ಕೆಲವೇ ಹೊತ್ತಿನಲ್ಲಿ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ, ಹರಿಹರ ತಾಲೂಕಿನ ಬಿಜೆಪಿ ಮುಖಂಡ ಬಿ.ಎಂ. ವಾಗೀಶಸ್ವಾಮಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿದರು. ಅವರೊಂದಿಗೆ ಮಲೇಬೆನ್ನೂರು ಪುರಸಭೆಯ 4 ಜನ ಸದಸ್ಯರೂ ಕೈ ಪಾಳಯಕ್ಕೆ ಬಂದರು.
ಚುನಾವಣೆ ರಂಗೇರುತ್ತಿದ್ದು ರಾಜಕೀಯ ಪಕ್ಷಗಳು ತಂತ್ರ, ಪ್ರತಿತಂತ್ರ ಹೆಣೆಯುತ್ತಿವೆ. ಮುಖಂಡರನ್ನು ಸೆಳೆಯುವುದು ಅದರ ಒಂದು ಭಾಗವಾಗಿದೆ. ಅಸಮಾಧಾನಿತರು, ಅವಕಾಶ ವಂಚಿತರನ್ನು ಗುರುತಿಸಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತಿದೆ.
...