

ದಾವಣಗೆರೆ : ಇಪ್ಪತ್ತಾರು ವರ್ಷಗಳ ಹಿಂದೆ ಹರಿಹರದಲ್ಲಿ ನೆರವೇರಿದ ಯುಗಮಾನೋತ್ಸವದಲ್ಲಿ ಪಂಚ ಪೀಠಾಧೀಶರು ಸಂಗಮಿಸಿದಾಗ ಆ ಅಪರೂಪದ ದೃಶ್ಯವನ್ನು ಹಿರಿಯ ಛಾಯಾಗ್ರಾಹಕ ಡಾ.ಎಚ್.ಬಿ. ಮಂಜುನಾಥ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಮತ್ತೊಂದು ವಿಶೇಷವೆಂದರೆ ಈ ಛಾಯಾಚಿತ್ರವನ್ನು ಪಂಚ ಪೀಠಾಧೀಶರು ಮೆಚ್ಚಿ ತಮ್ಮ ಪವಿತ್ರ ಹಸ್ತಾಕ್ಷರಗಳನ್ನು ನೀಡಿ ಆಶೀರ್ವದಿಸಿದ್ದರು ಎಂದು ಎಚ್.ಬಿ. ಮಂಜುನಾಥ ಸ್ಮರಿಸಿಕೊಂಡಿದ್ದಾರೆ. ಶಿವ-ವಿಷ್ಣು ಒಂದಾಗಿರುವ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ 1999 ರ ಮಾ. 23 ರಂದು ಇದನ್ನು ಕ್ಲಿಕ್ಕಿಸಿದ್ದರು. 26 ವರ್ಷಗಳ ನಂತರ ಸೋಮವಾರ ದಾವಣಗೆರೆಯಲ್ಲಿ ಪಂಚ ಪೀಠಾಧೀಶರು ಪುನಃ ಸಂಗಮಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಜುನಾಥ ಅವರು ತಾವು ತೆಗೆದ ಅಮೂಲ್ಯ ಚಿತ್ರವನ್ನು ನೆನಪು ಮಾಡಿಕೊಂಡಿದ್ದಾರೆ.