

ದಾವಣಗೆರೆ: ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆಯಿಂದ ತೆನೆ ಒಡೆಯುವ ಹಂತದವರೆಗೆ ಇದ್ದು ಅಲ್ಲಲ್ಲಿ ಬೆಂಕಿರೋಗದ ಬಾಧೆ ಕಾಣಿಸಿಕೊಂಡಿದೆ. ಮೋಡ ಮುಸುಕಿದ, ಹೆಚ್ಚು ಆರ್ದ್ರತೆಯಿಂದ ಕೂಡಿದ ವಾತಾವರಣದಲ್ಲಿ ಬಾಧೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.
ಇದೊಂದು ಶಿಲೀಂಧ್ರದಿಂದ ಬರುವ ರೋಗವಾಗಿದ್ದು, ಬೆಳೆಯ ಎಲ್ಲ ಹಂತಗಳಲ್ಲೂ ಕಾಣಿಸಿಕೊಂಡು ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಗರಿಗಳ ಮೇಲೆ ವಜ್ರಾಕಾರದ ಕಂದು ಬಣ್ಣದ ಚುಕ್ಕೆಗಳುಂಟಾಗಿ ಅದರ ಮಧ್ಯಭಾಗವು ಬೂದು ಬಣ್ಣ ಹೊಂದಿರುತ್ತದೆ. ಚುಕ್ಕೆಗಳು ದೊಡ್ಡದಾದಂತೆ ಒಂದಕ್ಕೊಂದು ಸೇರಿಕೊಂಡು ಎಲೆಗಳು ಸುಟ್ಟಂತೆ ಭಾಸವಾಗುತ್ತದೆ. ತೆನೆಯ ಹಂತದಲ್ಲಿ, ತೆನೆಯ ಕುತ್ತಿಗೆಯ ಭಾಗದಲ್ಲಿ ಕಂದು ಮಚ್ಚೆ ಕಂಡುಬಂದು ನಂತರ ತೆನೆ ಒಣಗಿ ಕಾಳು ಜೊಳ್ಳಾಗುತ್ತವೆ.
ಇದರ ನಿರ್ವಹಣೆಗಾಗಿ ಗದ್ದೆಯಲ್ಲಿ ಹಾಗೂ ಬದುಗಳಲ್ಲಿ ಕಳೆ ತೆಗೆದು ಜಮೀನಿನಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ತಕ್ಷಣ ಸಾರಜನಕಯುಕ್ತ ರಾಸಾಯನಿಕ ಗೊಬ್ಬರ ಕೊಡುವುದನ್ನು ನಿಲ್ಲಿಸಿ. ಆದಷ್ಟು 2 ಹಂತಗಳಲ್ಲಿ ಮೇಲುಗೊಬ್ಬರ ನೀಡಬೇಕು.
ಸಾವಯವ ಹಾಗೂ ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರು 10 ಲೀಟರ್ ನೀರಿಗೆ 1 ಲೀ. ಹುಳಿಮಜ್ಜಿಗೆ ಬೆರೆಸಿ ಸಿಂಪಡಿಸಿ. ರಾಸಾಯನಿಕ ಸಿಂಪಡಣೆಗಾಗಿ 4 ಗ್ರಾಂ. ಕಾರ್ಬನ್ ಡೈಜಿಂ 50 ಡಬ್ಲ್ಯು.ಪಿ. / 0.6 ಗ್ರಾಂ ಟ್ರ್ಯೈಸೈಕ್ಲೊಜೋಲ್ 75 ಡಬ್ಲ್ಯು.ಪಿ. / 1 ಮಿ.ಲೀ. ಎಡಿಫಿನ್‌ಫಾಸ್ 50 ಇ.ಸಿ. / 1 ಮಿ.ಲೀ. ಕಿಟಾಜಿನ್ 48 ಇ.ಸಿ. ಇವುಗಳಲ್ಲಿ ಯಾವುದಾದರೂ ಒಂದನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕೆಂದು ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.