ಭತ್ತಕ್ಕೆ ಬೆಂಬಲ ಬೆಲೆ, ಪ್ರೋತ್ಸಾಹ ಧನಕ್ಕೆ ಆಗ್ರಹ

dvg-raitha-sangha.jpg
Published on

ದಾವಣಗೆರೆ :  ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿ ಹಾಗೂ ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ (ಹುಚ್ಚವ್ವನಹಳ್ಳಿ ಬಣ) ಕಾರ್ಯಕರ್ತರು ನಗರ ಹೊರ ವಲಯದ ಬಾಡಾ ಕ್ರಾಸ್ ಬಳಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು 45 ಮಂದಿಯನ್ನು ಬಂಧಿಸಿದರು.  ಜಿಲ್ಲೆಯಲ್ಲಿ ಭತ್ತದ ಬೆಳೆಯ ಕಟಾವು ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ದರ ದೊರೆಯುತ್ತಿಲ್ಲ. ಈ ಹಂತದಲ್ಲಿ ಬೆಲೆ ಸ್ಥಿರತೆಯನ್ನು ಕಾಪಾಡಬೇಕು. ಖರೀದಿ ಕೇಂದ್ರದ ಮೂಲಕ ಭತ್ತವನ್ನು ಖರೀದಿಸಬೇಕು. ರಾಜ್ಯ ಸರ್ಕಾರ 1200 ರೂ. ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿದರು.  ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ವಿಜಯ ಕುಮಾರ ಸಂತೋಷ್, ನಗರ ಉಪ ವಿಭಾಗ ಡಿವೈಎಸ್ಪಿ ಶರಣ ಬಸವೇಶ್ವರ, ಪೊಲೀಸ್ ಇನ್‌ಸ್ಪೆಕ್ಟರ್ ಶಿಲ್ಪಾ ಇನ್ನಿತರ ಅಧಿಕಾರಿಗಳು, ಸಿಬ್ಬಂದಿ ಧಾವಿಸಿ 45 ಜನ ಪ್ರತಿಭಟನಾಕಾರರನ್ನು ಬಂಧಿಸಿ ಡಿ.ಎ.ಆರ್ ಆವರಣಕ್ಕೆ ಕರೆದೊಯ್ದರು.  ಸಂಜೆ ಪೊಲೀಸರು ಪ್ರತಿಭಟನಾಕಾರರನ್ನು ಬಿಡುಗಡೆ ಗೊಳಿಸಿದರಾದರೂ ಪ್ರತಿಭಟನಾಕಾರರು ಪೊಲೀಸ್ ವಾಹನ ಬಿಟ್ಟು ಕದಲಲಿಲ್ಲ. ಭತ್ತದ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.  ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಜಿಲ್ಲಾಧಿಕಾರಿ ಅವರೇ ಸ್ಥಳಕ್ಕೆ ಬರಬೇಕು ಎಂದು ರೈತರು ಒತ್ತಾಯಿಸಿದರು. ಸಂಜೆಯ ವರೆಗೂ ಮನವೊಲಿಸುವ ಪ್ರಯತ್ನ ಮುಂದುವರಿದಿತ್ತು.  ‘ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಲು ತಾಂತ್ರಿಕ ಸಮಸ್ಯೆ ಇದ್ದರೆ ಈ ಕುರಿತು ಕೂಡಲೇ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಬೇಕು. ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ ಕೊಡಿಸುವ ಪ್ರಯತ್ನ ಮಾಡಬೇಕು. ನಾಳೆ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ನಡೆಯುತ್ತಿರುವುದರಿಂದ ಅಲ್ಲಿಂದ ಬಂದ ಕೂಡಲೇ ಅಧಿಕಾರಿಗಳು ಆದ್ಯತೆಯ ಮೇರೆಗೆ ರೈತರ ಸಮಸ್ಯೆ ಆಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಒತ್ತಾಯಿಸಿದರು.  ರೈತ ಮುಖಂಡರಾದ ರವಿ, ಪ್ರಕಾಶ, ರಾಜು, ಚಿರಂಜೀವಿ, ಗಂಡುಗಲಿ, ನಾಗರಾಜ, ಗಂಗಾಧರ ಸ್ವಾಮಿ, ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net