

ದಾವಣಗೆರೆ : ಬೆಂಬಲ ಬೆಲೆ ಯೋಜನೆಯಡಿ ಇಂದಿನವರೆಗೂ ಒಂದು ಚೀಲ ಭತ್ತವನ್ನೂ ಖರೀದಿ ಮಾಡಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ರೈತಪರ ಹೋರಾಟಗಾರ ಕೊಳೇನಹಳ್ಳಿ ಬಿ.ಎಂ. ಸತೀಶ್ ಆರೋಪಿಸಿದ್ದಾರೆ. ಹಿಂಗಾರು, ಮುಂಗಾರು, ಬೇಸಿಗೆ ಹಂಗಾಮು ಅವಧಿಯ ಗೊಂದಲದಿಂದ ಫ್ರೂಟ್ ಐಡಿಯಲ್ಲಿ ಬೆಳೆ ಹೆಸರು ನಮೂದು ಸರಿಯಾಗಿ ಆಗಿಲ್ಲ. ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ಬೆಳೆದ ಭತ್ತ ಖರೀದಿಗಾಗಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಭತ್ತದ ಬೆಳೆ ಇಲ್ಲ ಎಂದು ಕೃಷಿ ಇಲಾಖೆ ಸರ್ಕಾರಕ್ಕೆ ವರದಿ ಮಾಡಿದೆ ಎಂದು ತಿಳಿಸಿದ್ದಾರೆ. ಕಳೆದ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಬೆಳೆ ಸಮೀಕ್ಷೆ ಮಾಡಲಾಗಿದೆ. ಆಗ ರೈತರ ಹೊಲಗಳಲ್ಲಿ ಬೆಳೆ ಇರಲಿಲ್ಲ. ಇದರಿಂದ ಪಾಳು ಎಂದು ಬೆಳೆ ಸಮೀಕ್ಷೆಯಲ್ಲಿ ನಮೂದಿಸಲಾಗಿದೆ. ಈಗ ಫ್ರೂಟ್ ಐಡಿಯಲ್ಲಿ ಹಿಂಗಾರು ಹಂಗಾಮಿನ ಕಾಲಂನಲ್ಲಿ ಬೆಳೆ ಪಾಳು ಎಂದು ನಮೂದು ಇದೆ. ಆದ್ದರಿಂದ ಖರೀದಿ ಕೇಂದ್ರದಲ್ಲಿರುವ ಅಧಿಕಾರಿಗಳು ಇದು ಹಿಂಗಾರು ಹಂಗಾಮಿನ ಭತ್ತ ಖರೀದಿ ಕೇಂದ್ರವಾಗಿರುವುದರಿಂದ ನೋಂದಣಿ ಸಾಧ್ಯವಿಲ್ಲ ಎಂದು ರೈತರಿಗೆ ಹೇಳಿ ಕಳುಹಿಸುತ್ತಿದ್ದಾರೆ ಎಂದು ಸತೀಶ್ ದೂರಿದ್ದಾರೆ. ಬೆಳೆ ಸಮೀಕ್ಷೆಯಲ್ಲಿ ಕೆಲವು ಬೇರೆ ಹೊಲಗಳ ಪೋಟೋ ಅಪ್ಲೋಡ್ ಆಗಿದೆ. ಹೊಲದಲ್ಲಿ ಭತ್ತದ ಬೆಳೆ ಇದ್ದರೆ ಕಬ್ಬಿನ ಹೊಲದ ಫೋಟೋ ಅಪ್ಲೋಡ್ ಆಗಿದೆ. ಇಲ್ಲವಾದರೆ ಬೀಳು ಇರುವ ಫೋಟೋ ಅಪ್ಲೋಡ್ ಆಗಿದೆ. ದರ ಕುಸಿದಾಗ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆದು ರೈತರ ಸಂಕಷ್ಟಕ್ಕೆ ಧಾವಿಸುವ ಸರ್ಕಾರದ ಉದ್ದೇಶ ತಲೆಬುಡವಿಲ್ಲದಂತೆ ಆಗಿದೆ. ರೈತರು ಖರೀದಿ ಕೇಂದ್ರಕ್ಕೆ ಅಲೆದಾಡಿ ಬಂದ ದಾರಿಗೆ ಸುಂಕ ಇಲ್ಲ ಎಂದು ಹಿಂದಿರುಗುತ್ತಿದ್ದಾರೆ ಎಂದು ಹೇಳಿದ್ದಾರೆ.