ಕಡಿಮೆ ನೀರಿನಲ್ಲೂ ಭತ್ತ ಬೆಳೆಯಬಹುದು

chn-nov-12-honne-marada-halli.-2.jpg
Published on

ಚನ್ನಗಿರಿ :  ರೈತರು ಕಡಿಮೆ ನೀರು ಬಳಸಿ ಭತ್ತ ಬೆಳೆಯಬಹುದಾಗಿದೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು.  ಕೃಷಿ ಇಲಾಖೆ, ಕಿಸಾನ್ ಕ್ರಾಪ್ಟ್ ಸಹಯೋಗದಲ್ಲಿ ತಾಲೂಕಿನ ಹೊನ್ನೇಮರದಹಳ್ಳಿ ಗ್ರಾಮದಲ್ಲಿ ಮಂಗಳವಾರ ರೈತರಿಗೆ ಏರ್ಪಡಿಸಿದ್ದ ಒಣ ನೇರ ಬಿತ್ತನೆಯ ಭತ್ತದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ರೈತರು ಗಾಳಿಯಾಡುವ ಭೂಮಿಯಲ್ಲಿ ನೇರವಾಗಿ ಭತ್ತವನ್ನು ಒಣ ಬಿತ್ತನೆ ಮಾಡಬಹುದು. ಇದಕ್ಕೆ  ಕೆಸರು ಗದ್ದೆಯ ಅಗತ್ಯವಿಲ್ಲ. ದ್ವಿದಳಧಾನ್ಯ, ತರಕಾರಿ, ಎಣ್ಣೇಕಾಳು ಬೆಳೆ, ಅಡಕೆ ತೋಟದ ನಡುವೆ ಮಧ್ಯಂತರ ಬೆಳೆಯಾಗಿ ಭತ್ತ ಬೆಳೆಯಬಹುದಾಗಿದೆ. ಇದರಿಂದ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.  ರೈತರ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ಪರದಾಡುವಂತಾಗಿದೆ. ಮಾತಿನಲ್ಲಿ ಮಾತ್ರ ರೈತರನ್ನು ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತಿದ್ದು, ಸರ್ಕಾರದ ಧೋರಣೆ ಬದಲಾಗಬೇಕು, ಮಳೆ ನಂಬಿ ಜೀವನ ಕಟ್ಟಿಕೊಂಡ ರೈತ ಸುಖಜೀವನ ಕಾಣುವುದು ಕಷ್ಟವಾಗಿದೆ ಎಂದರು.  ದೇಶದಲ್ಲಿ ಒಂದು ವರ್ಷ ರೈತರು ಪ್ರತಿಭಟನೆ ನಡೆಸಿ ಯಾವುದೇ ಬೆಳೆ ಬೆಳೆಯುವುದನ್ನು ನಿಲ್ಲಿಸಿದರೆ ಪರಿಸ್ಥಿತಿ ಏನಾಗುವುದೆಂಬ ಚಿಂತನೆ ಮಾಡಬೇಕಾಗುತ್ತದೆ ಎಂದು ಸರ್ಕಾರಗಳನ್ನು ಎಚ್ಚರಿಸಿದರು.  ರೈತರು ಮೊದಲು ಕುಟುಂಬಕ್ಕೆ ಬೇಕಾದ ಪ್ರತಿಯೊಂದು ಬೆಳೆ ಬೆಳೆದುಕೊಳ್ಳುತ್ತಿದ್ದರು. ಇಂದು ಹಣದಾಸೆಗಾಗಿ ವ್ಯವಹಾರಿಕ ಬೆಳೆ ಬೆಳೆಯಲಾಗುತ್ತಿದೆ. ಇದರಿಂದ ಮುಂದಿನ ದಿನದಲ್ಲಿ ರೈತರು ಕಷ್ಟ ಅನುಭವಿಸಬೇಕಾಗುತ್ತದೆ ಎಂದರು.  ಕಿಸಾನ್‌ಕ್ರಾಪ್ಟ್ ಸಿಇಒ ಅಮಿತ್‌ಶರ್ಮ ಮಾತನಾಡಿ, ಸಾಂಪ್ರದಾಯಿಕ ನೀರಾವರಿ ಭತ್ತದ ಪದ್ಧತಿಯಲ್ಲಿ ಒಂದು ಕೆಜಿ ಭತ್ತ ಬೆಳೆಯಲು 5 ಸಾವಿರ ಲೀಟರ್ ನೀರು ಬಳಕೆಯಾಗುತ್ತದೆ. ಆದರೆ ನೇರ ಬಿತ್ತನೆಯ ಭತ್ತ ಬೆಳೆಯಲು 2.5 ಸಾವಿರ ಲೀಟರ್ ನೀರು ಸಾಕು. ಮಳೆ ಬೀಳುವ ಪ್ರದೇಶಗಳಲ್ಲಿ ಭತ್ತ ಬೆಳೆಯಬಹುದಾಗಿದೆ ಎಂದು ಹೇಳಿದರು.  ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಬಿ.ಆರ್.ರಘು, ಮುರುಗೇಶಪ್ಪ, ಶ್ರೀನಾಥ್, ಬಸವರಾಜಪ್ಪ, ಚಂದ್ರಹಾಸ ಹಿರೇಮಳಲಿ, ಎಂ.ಎಸ್.ಸೌಜನ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net