ಭತ್ತದ ಉತ್ಪಾದನೆ ಹೆಚ್ಚಿಸಲು ತಾಂತ್ರಿಕತೆ ಬಳಕೆ ಅವಶ್ಯಕ

DVG-DRON-20.jpg
Published on

ದಾವಣಗೆರೆ :  ಜಿಲ್ಲೆಯಲ್ಲಿ ಭತ್ತದ ಉತ್ಪಾದನೆ ಹೆಚ್ಚಿಸಲು ನವೀನ ತಾಂತ್ರಿಕತೆ ಬಳಸಿಕೊಳ್ಳಬೇಕು ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ್ ಸಲಹೆ ನೀಡಿದರು.  ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಶುಕ್ರವಾರ ಭತ್ತದ ಬೆಳೆಗೆ ಕೃಷಿ ಡ್ರೋನ್ ಮೂಲಕ ನ್ಯಾನೋ ಯೂರಿಯ ಮತ್ತು ಬೇವಿನ ಎಣ್ಣೆ ಸಿಂಪಡಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತಿದ್ದು, ರೈತರು ಯಾಂತ್ರಿಕೃತ ಪದ್ಧತಿ ಅನುಸರಿಸುವ ಅನಿವಾರ್ಯತೆ  ಬಂದಿದೆ ಎಂದು ತಿಳಿಸಿದರು.  ಕೃಷಿ ಡ್ರೋನ್ ಬಳಕೆಯಿಂದ ಸಮಯ ಮತ್ತು ನೀರಿನ ಉಳಿತಾಯವಾಗುತ್ತದೆ. ಒಂದು ಎಕರೆ ಪ್ರದೇಶವನ್ನು ಕೇವಲ 10 ಲೀಟರ್ ನೀರು ಬಳಸಿ 10 ನಿಮಿಷದಲ್ಲಿ ಸಿಂಪರಣೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಡ್ರೋನ್ ಬಳಕೆ ಅನಿವಾರ್ಯವಾಗಲಿದೆ ಎಂದರು.  ರೈತ ಮುಖಂಡ ತೇಜಸ್ವಿ ಪಟೇಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೃಷಿಯಲ್ಲಿ ಔಷಧಿ ಸಿಂಪರಣೆಗೆ ಡ್ರೋನ್ ಬಳಕೆ ಮಾಡುವುದರಿಂದ ಆರೋಗ್ಯದ ಸಮಸ್ಯೆ ಕೂಡ ಪರಿಹಾರವಾಗುತ್ತದೆ, ಜತೆಗೆ ಇಳುವರಿ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.  ಮಣ್ಣು ವಿಜ್ಞಾನಿ ಸಣ್ಣಗೌಡ್ರು ಮಾತನಾಡಿ, ನ್ಯಾನೋ ಯೂರಿಯಾ ದ್ರವರೂಪದ ಗೊಬ್ಬರವನ್ನು ಭತ್ತದ ಬೆಳೆಗೆ ಬಳಸಿದರೆ ಪುನಃ ಹರಳಿನ ರೂಪದ ಯೂರಿಯಾ ಕೊಡುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.  ಡ್ರೋನ್ ಮೂಲಕ ಸಾವಯುವ ದ್ರವರೂಪದ ಗೊಬ್ಬರಗಳಾದ ಮತ್ಸಜನ್ಯ, ಯೂಮಿಕ್ ಆಸಿಡ್, ಅಷ್ಟಗವ್ಯ ಮತ್ತು ಹಳೆ ಮಜ್ಜಿಗೆ ಮಿಶ್ರಣ ಮಾಡಿ ಸಾವಯುವ ಕೃಷಿಕ ರುದ್ರೇಶ್ ಅವರ ಭತ್ತದ ತಾಕಿಗೆ ಸಿಂಪಡಣೆ ಮಾಡಲಾಯಿತು. ಕಾಂಡ ಕೊರಕದ ಉಳಿವಿನ ನಿರ್ವಹಣೆಗಾಗಿ ಬೇವಿನ ಎಣ್ಣೆ ಸಿಂಪಡಿಸಲಾಯಿತು.  ಪ್ರಗತಿಪರ ರೈತ ಟಿ.ವಿ. ರುದ್ರೇಶ್, ಮುರುಗೇಶ್, ತಿಪ್ಪೇಸ್ವಾಮಿ, ಚಂದ್ರಶೇಖರ್, ಮನೋಜ್, ಡಿ.ವಿ. ರುದ್ರೇಶ್ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net