

ರಮೇಶ ಜಹಗೀರದಾರ್ ದಾವಣಗೆರೆ : ಮೆಕ್ಕೆಜೋಳವನ್ನು ಬಿಟ್ಟರೆ ಜಿಲ್ಲೆಯಲ್ಲಿ ಎರಡನೇ ಅತಿದೊಡ್ಡ ಬೆಳೆಯಾದ ಭತ್ತದ ನಾಟಿಗೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಸ್ಥಳೀಯರು ಸಿಗದ ಕಾರಣ ಮಲೇಬೆನ್ನೂರು ಭಾಗದಲ್ಲಿ ರೈತರು ಉತ್ತರ ಭಾರತದಿಂದ ಕೆಲಸಗಾರರನ್ನು ಕರೆಸಿದ್ದಾರೆ. ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶವಿದೆ. ಭದ್ರಾ ನಾಲೆಯ ನೀರು ಇದಕ್ಕೆ ಆಧಾರವಾಗಿದೆ. ಮಳೆಗಾಲ ಮತ್ತು ಬೇಸಿಗೆ ಹಂಗಾಮಿನಲ್ಲಿ ಭತ್ತದ ಕೃಷಿ ನಡೆಯುತ್ತದೆ. ಆಗ ಕೂಲಿ ಕಾರ್ಮಿಕರಿಗೆ ಎಲ್ಲಿಲ್ಲದ ಬೇಡಿಕೆ. ಆದರೆ ಇತ್ತೀಚೆಗೆ ಭತ್ತದ ನಾಟಿ ಕಾರ್ಯಕ್ಕೆ ಕಾರ್ಮಿಕರ ಕೊರತೆ ಎದುರಾಗಿದೆ. ಅದರಲ್ಲೂ ಹರಿಹರ ತಾಲೂಕಿನ ಮಲೇಬೆನ್ನೂರು ಸುತ್ತಮುತ್ತ ಈ ಬಾರಿ ಸ್ಥಳೀಯರು ಸಿಗದ ಕಾರಣ ದೂರದ ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳದಿಂದ 200 ಕ್ಕೂ ಹೆಚ್ಚು ಕೃಷಿ ಕಾರ್ಮಿಕರು ಆಗಮಿಸಿದ್ದಾರೆ. ಮಧ್ಯವರ್ತಿಗಳ ಮೂಲಕ ರಾಜ್ಯಕ್ಕೆ ಬರುವ ಈ ಕಾರ್ಮಿಕರು ಒಂದೆರಡು ತಿಂಗಳು ಇದ್ದು ಭತ್ತದ ನಾಟಿ ಮಾಡಿ, ತಮ್ಮೂರಿಗೆ ಮರಳುತ್ತಾರೆ. ಭತ್ತದ ಕಣಜ ಎಂದು ಕರೆಯಲಾಗುವ ಸಿಂಧನೂರು, ಗಂಗಾವತಿ ಭಾಗದಲ್ಲಿ ಕೆಲಸ ಮುಗಿಸಿ ಇಲ್ಲಿಗೆ ಬಂದಿದ್ದಾರೆ. ಮಲೇಬೆನ್ನೂರು, ನಿಟ್ಟೂರು, ಕುಂಬಳೂರು, ಕುಣೆಬೆಳಕೆರೆ, ಬೂದಿಹಾಳ್, ಗುಡದಳ್ಳಿ, ಸಂಕ್ಲಿಪುರ, ನಂದಿತಾವರೆ, ಕೊಮಾರನಹಳ್ಳಿ, ಕಮಲಾಪುರ ಮುಂತಾದ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದಾರೆ.