

ಹೊನ್ನಾಳಿ : ಪ್ರಸ್ತುತ ‘ಗಂಗಾ ಸ್ನಾನ ತುಂಗಾ ಪಾನ’ ಎಂಬ ಮಾತನ್ನು ಎಲ್ಲಿಯೂ ಕೇಳಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ನದಿಗಳು ಕಲುಷಿತಗೊಂಡು ಅನೇಕ ರೋಗ ರುಜಿನಗಳಿಗೆ ಕಾರಣವಾಗಿವೆ. ಇದಕ್ಕೆ ಮನುಕುಲವೇ ಕಾರಣ ಎಂದು ಆರ್ಥಿಕ ತಜ್ಞ ಹಾಗೂ ಪರಿಸರವಾದಿ ಪ್ರೊ ಬಿ.ಎಂ. ಕುಮಾರಸ್ವಾಮಿ ಹೇಳಿದರು. ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರ್ಯಾವರಣ ಟ್ರಸ್ಟ್‌ನಿಂದ ನಿರ್ಮಲ ತುಂಗಭದ್ರಾ ಅಭಿಯಾನದ ಅಂಗವಾಗಿ ಸೋಮವಾರ ತಾಲೂಕಿನ ಗಡಿ ಗ್ರಾಮ ಹರಳಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಪಾದಯಾತ್ರೆಯಲ್ಲಿ ಮಾತನಾಡಿದರು. ಈ ಹಿಂದೆ ನದಿಗಳು ಸಾಕಷ್ಟು ಶುಚಿಯಾಗಿದ್ದವು. ಕಾರ್ಖಾನೆ ಹಾಗೂ ನಗರದ ಅನೈರ್ಮಲ್ಯ ಸೇರಿದ್ದರಿಂದ ಶೇ.60 ರಷ್ಟು ಕಾಯಿಲೆ ಅಶುದ್ಧ ನೀರಿನಿಂದಲೇ ಬರುತ್ತವೆ ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದೆ. ನದಿಗೆ ಯಾವುದೇ ತ್ಯಾಜ್ಯ ವಸ್ತು ಬಿಸಾಡಬಾರದು ಎಂದು ಮನವಿ ಮಾಡಿದರು. ತುಂಗ ಹಾಗೂ ಭದ್ರಾ ನದಿ ಸುಮಾರು 600 ಕಿಮೀ ಸಾಗಿ ಆಂಧ್ರಪ್ರದೇಶದ ಕೃಷ್ಣಾ ನದಿಗೆ ಸೇರುತ್ತದೆ. 13 ಉಪ ನದಿಗಳ ಪೈಕಿ ತುಂಗಭದ್ರಾ ನದಿಯೇ ಅತ್ಯಂತ ದೊಡ್ಡ ನದಿ. ಇಂತಹ ನದಿಯ ನೀರನ್ನು ಹಿಂದೆ ಫಿಲ್ಟರ್ ಮಾಡದೇ ಕುಡಿಯುತ್ತಿದ್ದೆವು. ಆದರೆ ಈಗ ಪ್ರತಿ ಮನೆಯಲ್ಲೂ ಅಕ್ವಾಗಾರ್ಡ್ ಶುದ್ಧೀಕರಿಸಿದ ನೀರನ್ನೇ ಕುಡಿಯುತ್ತಿದ್ದೇವೆ ಎಂದರು. ಅಪರೂಪದ ಔಷಧೀಯ ಗುಣ ಹೊಂದಿರುವ ಪಶ್ಚಿಮ ಘಟ್ಟದ ಸಸ್ಯ ಸಂಕುಲಗಳ ನಡುವೆ ತುಂಗಭದ್ರಾ ನದಿ ಹರಿಯುತ್ತಿದೆ. ಇದನ್ನು ಕಾಪಾಡಿದರೆ ಔಷಧೀಯ ಗುಣ ಇರುವ ಈ ನದಿಯ ನೀರು ನಮ್ಮ ಆರೋಗ್ಯಕ್ಕೆ ರಾಮಬಾಣವಾಗುವುದರಲ್ಲಿ ಸಂದೇಹ ಇಲ್ಲ ಎಂದು ತಿಳಿಸಿದರು. ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಮಾತನಾಡಿ, ಪ್ರಕೃತಿದತ್ತವಾಗಿ ಸಿಗುವ ಗಾಳಿ, ಬೆಳಕು ಹಾಗೂ ನೀರನ್ನು ಮುಂದಿನ ಪೀಳಿಗೆಗೆ ಸುಸ್ಥಿತಿಯಲ್ಲಿಡಬೇಕಾದದ್ದು ನಮ್ಮ ಕರ್ತವ್ಯ, ನಾಗರಿಕತೆ ನಾಗಾಲೋಟದಲ್ಲಿ ಓಡುತ್ತಿರುವುದರಿಂದ ಇವು ಕಲುಷಿತಗೊಂಡು ಭೂಮಿ ಕೂಡ ತನ್ನ ಗುಣಮಟ್ಟ ಕಳೆದುಕೊಂಡಿದೆ, ಇದಕ್ಕೆ ನಮ್ಮೆಲ್ಲರ ಸ್ವಾರ್ಥವೂ ಕಾರಣ ಎಂದರು. ಪ್ರಸ್ತುತ ಪಾದಯಾತ್ರೆ ಸಕಾಲದಲ್ಲಿ ಆರಂಭಗೊಂಡಿದೆ, ಕೇವಲ ಪಾದಯಾತ್ರೆ ನಡೆಸಿ ನಾಲ್ಕು ಮಾತನಾಡಿ ಮನೆಗೆ ಹೋದರೆ ಸಾಲದು. ಎಲ್ಲರೂ ನದಿ ಶುದ್ಧೀಕರಣಕ್ಕೆ ಸ್ಥಳೀಯ ಸಂಸ್ಥೆ, ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ವೈದ್ಯ, ಮಾದವನ್,ವಿವೇಕ್ ತ್ಯಾಗಿ, ಭೀಮರಾವ್, ಕಮಲ ನೆಹರು ಕಾಲೇಜಿನ ನಿವೃತ್ತ ಪ್ರಾಚಾರ್ಯ ನಾಗಭೂಷಣ್, ಬಾಲಕೃಷ್ಣ ನಾಯ್ಡು, ವರದರಾಜು, ರಾಂಪುರ ಪ್ರವೀಣ್, ಎ.ಬಿ.ಹನುಮಂತಪ್ಪ, ಕತ್ತಿಗೆ ನಾಗರಾಜು, ಎಂ.ಆರ್.ಮಹೇಶ್, ಯಕ್ಕನಹಳ್ಳಿ ಜಗದೀಶ್,ಪ್ರೇಮಕುಮಾರ್ ಭಂಡಿಗಡಿ, ಕೆ.ವಿ.ಚನ್ನಪ್ಪ ನೂರಾರು ಪಾದಯಾತ್ರಿಗಳು ಇದ್ದರು.