

ದಾವಣಗೆರೆ : ಸಂಘಟನೆಯೇ ಶಕ್ತಿ ಎಂಬುದನ್ನು ಮರೆಯಬೇಡಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು. ನಗರದ ಎಂಬಿಎ ಕಾಲೇಜಿನ ಆವರಣದಲ್ಲಿ ಬುಧವಾರ ಸಂಜೆ ನಡೆದ ಮಹಾಸಭಾದ ಜಿಲ್ಲಾ ಮಹಿಳಾ ಮತ್ತು ನಗರ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಪದಾಧಿಕಾರಿಗಳು ಎಲ್ಲರೂ ಮೆಚ್ಚುವಂತೆ ಕೆಲಸ ಮಾಡಿ ಎಂದು ತಿಳಿಸಿದ ಅವರು, ಸೇವಾಕಾಂಕ್ಷಿಗಳಾಗಿ ನೀವು ಬಂದಿರುವುದನ್ನು ನೋಡಿ ನನ್ನ ಹೃದಯ ತುಂಬಿ ಬಂದಿದೆ. ಇನ್ನು ಮುಂದೆ ಲಿಂಗಾಯತ ವೀರಶೈವ ಸಮಾಜದ ಜವಾಬ್ದಾರಿಯನ್ನು ನೀವೆಲ್ಲ ಶ್ರದ್ಧೆಯಿಂದ ಮುನ್ನಡೆಸುತ್ತೀರಿ ಎಂಬ ನಂಬಿಕೆಯಿದೆ ಎಂದು ತಿಳಿಸಿದರು. ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಮಹಾಸಭಾ ಅಧ್ಯಕ್ಷರಾದ ಮೇಲೆ ಸಂಘಟನೆಗೆ ಜೀವ ಬಂದಿದೆ. ಯಾವ ಮಠಾಧೀಶರೂ ಮಾಡಲಾಗದ ಕೆಲಸವನ್ನು ಅವರು ಸಮಾಜಕ್ಕೆ ಮಾಡಿದ್ದಾರೆ ಎಂದರು. ಸ್ವಾಮೀಜಿಗಳ ವಲಯದಲ್ಲೂ ಅವರಿಗೆ, ಅವರ ಮಾತಿಗೆ ಸಹಕಾರ ಮತ್ತು ಮನ್ನಣೆ ಇದೆ. ಅವರ ಮುಂದಾಳತ್ವದಲ್ಲಿ ಸಮಾಜ ಹೆಮ್ಮೆ ಪಡುವಂಥ ಕಾರ್ಯ ಮಾಡೋಣ ಎಂದು ಅಭಿಪ್ರಾಯ ಪಟ್ಟರು. ಮಹಾಸಭಾದ ಮತ್ತೊಬ್ಬ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಅಥಣಿ ವೀರಣ್ಣ ಮಾತನಾಡಿ, ಡಾ. ಶಾಮನೂರು ಶಿವಶಂಕರಪ್ಪ ಅವರು ಸಮಾಜ ಮುಖ್ಯ ಎಂದು ಗರ್ಜಿಸಿದಾಗ ಸಮಾಜ ಒಡೆಯುವುದು ತಪ್ಪಿತು ಎಂದು ಸ್ಮರಿಸಿದರು. ಜಾತಿ ಗಣತಿಯಾದಲ್ಲಿ ಎಲ್ಲರೂ ಸೇರಿ ಸಮಾಜದ ನೈಜ ಸಂಖ್ಯೆಯನ್ನು ತೋರಿಸುವ ಕೆಲಸ ಮಾಡದಿದ್ದರೆ, ನಮ್ಮ ಜನಸಂಖ್ಯೆ ವಾಸ್ತವಕ್ಕಿಂತ ಕಡಿಮೆಯಾಗಿ ದುಷ್ಪರಿಣಾಮವಾಗುತ್ತದೆ. ಸಮಾಜದ ಹಿತ ಕಾಯುವ ಮಹಾಸಭೆಯ ಸೂಚನೆ ಪ್ರಕಾರ ಜಾತಿ, ಉಪ ಜಾತಿಗಳನ್ನು ಜನಗಣತಿ ಫಾರಂನಲ್ಲಿ ನಮೂದಿಸಿ ಎಂದು ಮನವಿ ಮಾಡಿದರು. ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡಿ, ಯಾವುದೇ ಸಂಘಟನೆಯಲ್ಲಿ ಅಧಿಕಾರ ಪಡೆಯುವುದು ಬರೀ ಸೇವೆಗಾಗಿ ಎಂದು ಭಾವಿಸಬಾರದು. ಅದನ್ನು ಕರ್ತವ್ಯ ಎಂದು ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು. ಸಮಾಜದ ಋಣ ತೀರಿಸಲು ಒಗ್ಗಟ್ಟಿನಿಂದ ಹಾಗೂ ಒಮ್ಮತದಿಂದ ಕಾರ್ಯ ನಿರ್ವಹಿಸೋಣ. ಸಮಾಜದಲ್ಲಿ ಹಲವಾರು ಜನ ಕಷ್ಟದಲ್ಲಿದ್ದಾರೆ. ಒಬಿಸಿ ಸ್ಥಾನಮಾನ ಕಲ್ಪಿಸಿಕೊಟ್ಟಲ್ಲಿ ಅವರಿಗೆ ಅನುಕೂಲವಾಗಲಿದೆ ಎಂದರು. ಮಹಾಸಭಾದ ಮತ್ತೊಬ್ಬ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ಎಸ್. ಗಣೇಶ್, ಜಿಲ್ಲಾ ಗೌರವಾಧ್ಯಕ್ಷ ಎಸ್.ಜಿ. ಉಳವಯ್ಯ, ರಾಜ್ಯ ಘಟಕದ ಶಶಿಕಲಾ ಮೂರ್ತಿ, ಪ್ರಶಾಂತ್ ದುಗ್ಗತ್ತಿಮಠ್, ನಿರ್ಮಲಾ ಸುಭಾಷ್, ಸುಷ್ಮಾ ಪಾಟೀಲ್ ಇದ್ದರು. ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ್ ಪ್ರಾಸ್ತಾವಿಕ ಮಾತನಾಡಿ, ಸಮಾಜದ ಕೆಲಸಕ್ಕೆ ಸದಾ ಸನ್ನದ್ಧರಾಗಿರಬೇಕೆಂದು ವಿನಂತಿಸಿದರು. ಮಹಾಸಭಾ ಚನ್ನಗಿರಿ ಪ್ರತಿನಿಧಿ ಉಮೇಶ್ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಮತ್ತು ಯುವ ಘಟಕ, ಮಹಾನಗರ ಪಾಲಿಕೆ ಘಟಕ ಮತ್ತು ಮಹಿಳಾ ಘಟಕಗಳ ಪದಾಧಿಕಾರಿಗಳಿಗೆ ನೇಮಕಾತಿ ದೃಢೀಕರಣ ಪತ್ರವನ್ನು ವಿತರಿಸಲಾಯಿತು. ದಾವಣಗೆರೆ ವಿವಿಯ ಪ್ರಾಧ್ಯಾಪಕ ಅಶೋಕ್ ಕುಮಾರ್ ಪಾಳೇದ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ವಂದಿಸಿದರು.