ಗ್ರಾಮಗಳಿಗೆ ಡಿಸಿ, ಸಿಇಒ ಭೇಟಿ, ಸಮಸ್ಯೆಗೆ ಸ್ಪಂದನೆ

dvg-dc-sp-visit.jpg
Published on

ಸಂಸದೆ ಸೂಚನೆ ಪಾಲಿಸಿದ ಅಧಿಕಾರಿಗಳು    ವಿಜಯವಾಣಿ ಸುದ್ದಿಜಾಲ ದಾವಣಗೆರೆ  ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್ ಜಗಳೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಇತ್ತೀಚೆಗೆ ಭೇಟಿ ನೀಡಿ ಅವರ ಸಮಸ್ಯೆಳಿಗೆ ಪರಿಹಾರ ಒದಗಿಸಿದರು.  ಜಗಳೂರು ತಾಲೂಕಿನಗ ಸಂಗೇನಹಳ್ಳಿ ಕೆರೆಗೆ ಬಾಗಿನ ಅರ್ಪಿಸಲು ತೆರಳಿದ್ದ ವೇಳೆ ಕಲ್ಲೇದೇವರಪುರ, ಸಂಗೇನಹಳ್ಳಿ, ಬೆಣ್ಣೆಹಳ್ಳಿ, ಬಸಪ್ಪನಹಟ್ಟಿ, ಗೌರಮ್ಮನಹಟ್ಟಿ ಗ್ರಾಮಸ್ಥರು 10ಕ್ಕೂ ಹೆಚ್ಚು ಸಮಸ್ಯೆಗಳನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಬಳಿ ಹೇಳಿಕೊಂಡಿದ್ದರು.  ಈ ಸಮಸ್ಯೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ್ದ ಸಂಸದೆ, ಡಿಸಿ ಮತ್ತು ಸಿಇಒ ಅವರೊಂದಿಗೆ ಮಾತನಾಡಿ ಆ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದ್ದರು.  ಅದರಂತೆ ಜಿಲ್ಲಾಡಳಿತದ ಅಧಿಕಾರಿಗಳು ಆ ಗ್ರಾಮಗಳಿಗೆ ಭೇಟಿ ನೀಡಿದ್ದರು. ಸಂಗೇನಹಳ್ಳಿ ಕೆರೆಯ ಸುತ್ತ ಸ್ವಚ್ಛತೆಗೆ ಚಾಲನೆ ನೀಡಿದರು.  ನಂತರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಲ್ಲೇದೇವರಪುರ, ಸಂಗೇನಹಳ್ಳಿ, ಬೆಣ್ಣೆಹಳ್ಳಿ, ಬಸಪ್ಪನಹಟ್ಟಿ, ಗೌರಮ್ಮನಹಟ್ಟಿ ಗ್ರಾಮಗಳ ಬಳಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಹೆದ್ದಾರಿ ಪಕ್ಕದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಬಾಕ್ಸ್ ಚರಂಡಿ ನಿರ್ಮಿಸುವಂತೆ ಸೂಚಿಸಿದರು.  ಕಲ್ಲೇದೇವರಪುರದ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಲು ಸೂಚನೆ ನೀಡಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಕ್ರಮ ಕೈಗೊಂಡರು. ಸಂಗೇನಹಳ್ಳಿಯ ಶಾಲಾ ಕೊಠಡಿ ದುರಸ್ತಿ ಮತ್ತು ಸೇತುವೆ ನಿರ್ಮಾಣ ಮಾಡಲು ಹಾಗೂ ಕಲ್ಲೇದೇವರಪುರದ ಪ್ರಸಿದ್ಧ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನ ದುರಸ್ತಿಯನ್ನು ಆದಷ್ಟು ಶೀಘ್ರ ಮಾಡಿಸುವ ಭರವಸೆ ನೀಡಿದರು.  ಕ್ರಮ ಕೈಗೊಂಡ ಬಗ್ಗೆ ಇಬ್ಬರೂ ಅಧಿಕಾರಿಗಳು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಸಂಗೇನಹಳ್ಳಿ ಕೆರೆಯನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಂಸದೆ ಸೂಚಿಸಿದರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net