

ದಾವಣಗೆರೆ : ಹಳೆಯ ಪಿಂಚಣಿ ಯೋಜನೆಯ ಜಾರಿಗೆ ವಿಳಂಬ ಮಾಡದೇ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸಂಗಣ್ಣನವರ ಆಗ್ರಹಿಸಿದರು. ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ, ಸಂಘದ ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಎನ್‌ಪಿಎಸ್ ರದ್ದುಗೊಳಿಸಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಸಂಬಂಧ ರಾಜ್ಯ ಸರ್ಕಾರ 90 ದಿನದೊಳಗೆ ನಿರ್ಣಯ ಕೈಗೊಳ್ಳದಿದ್ದರೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎನ್‌ಪಿಎಸ್ ರದ್ದುಗೊಳಿಸುವುದಾಗಿ ಮಾತು ಕೊಟ್ಟಿದ್ದ ಕಾಂಗ್ರೆಸ್ ಪಕ್ಷ ಇದುವರೆಗೂ ಆ ಭರವಸೆ ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿದಾಗ ಸಮಿತಿಯೊಂದನ್ನು ರಚಿಸಿ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು. ಸಚಿವ ಸಂಪುಟದ ಇತರ ಸದಸ್ಯರಿಗೂ ಈ ಬಗ್ಗೆ ಮನವಿ ಮಾಡಲಾಗಿದೆ. ವಿಷಯವನ್ನು ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸಿ ನಿರ್ಣಯ ಕೈಗೊಳ್ಳಬೇಕಿದೆ ಎಂದು ತಿಳಿಸಿದರು. ಕೆಲವು ಸಂಘಟನೆಗಳಿಗೆ ಎನ್‌ಪಿಎಸ್ ರದ್ದಾಗುವುದು ಈಗಲೇ ಬೇಡವಾಗಿದೆ. ಮುಂದಿನ ಚುನಾವಣೆಯಲ್ಲಿ ಈ ವಿಷಯವನ್ನೇ ಮುಂದಿಟ್ಟುಕೊಂಡು ಸ್ಪರ್ಧಿಸುವುದು ಅವರ ಉದ್ದೇಶವಾಗಿದೆ ಎಂದು, ಸರ್ಕಾರಿ ನೌಕರರ ಸಂಘದ ವಿರುದ್ಧ ಹರಿಹಾಯ್ದರು. ಮಾತೃ ಸಂಘಟನೆ ಜವಾಬ್ದಾರಿಯಿಂದ ವರ್ತಿಸಬೇಕು. ನಮ್ಮ ಸಂಘಟನೆಯ 60 ಮಂದಿ ರಾಜ್ಯ ಪದಾಧಿಕಾರಿಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ತಾಲೂಕು ಹಾಗೂ ಜಿಲ್ಲೆಗಳಲ್ಲಿ ಕರಡು ಮತದಾರರ ಪಟ್ಟಿ ಸಿದ್ಧಪಡಿಸಿಲ್ಲ. ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ತಿಳಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘವು ಇನ್ನೊಂದು ಸಂಘಟನೆಯನ್ನು ಸೃಷ್ಟಿಸುವ ಅಗತ್ಯವೇನಿದೆ. ಎನ್‌ಪಿಎಸ್ ನೌಕರರನ್ನು ಒಡೆಯುವ ಮೂಲಕ ಮುಂದಿನ ಚುನಾವಣೆಯನ್ನು ಗೆಲ್ಲುವ ತಂತ್ರ ಮಾಡಲಾಗಿದೆ. ನೌಕರರು ಯಾವುದೇ ಭಯ, ಆತಂಕಕ್ಕೆ ಒಳಗಾಗಬಾರದು ಎಂದು ತಿಳಿಸಿದರು. ಮಾತೃ ಸಂಘಟನೆಯು ಮುಂದಕ್ಕೆ ಹೋಗಲು ಬಿಡದಿದ್ದರೂ ಚಿಂತೆಯಿಲ್ಲ, ಹಿಂದಕ್ಕೆ ಎಳೆಯಬಾರದು. ಸಂಘಟನೆಯ ಧರ್ಮವನ್ನು ಪಾಲಿಸಬೇಕು. ಎನ್‌ಪಿಎಸ್ ನೌಕರರ ಬೇಡಿಕೆಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಯುಪಿಎಸ್ ಪಿಂಚಣಿ ಯೋಜನೆಯನ್ನು ‘ಹೊಸ ಬಾಟಲಿಯಲ್ಲಿನ ಹಳೇ ಮದ್ಯ’ ಎಂದು ವಿಶ್ಲೇಷಿಸಿದರು. ಹಳೇ ಪಿಂಚಣಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘವು 2015 ರಿಂದ ನಿರಂತರವಾಗಿ ಎನ್‌ಪಿಎಸ್ ರದ್ದತಿಗಾಗಿ ಹೋರಾಡುತ್ತ ಬಂದಿದೆ. ಅಧಿಕಾರದ ಆಸೆಗಾಗಿ ಈ ಸಂಘಟನೆಯನ್ನು ಮಾಡಿಲ್ಲ, ನೌಕರರಿಗೆ ನ್ಯಾಯ ಕೊಡಿಸುವ ಉದ್ದೇಶದೊಂದಿಗೆ ಭರವಸೆಯ ಬೆಳಕಾಗಿ ಕೆಲಸ ಮಾಡುತ್ತಿದೆ. ಬೇರೆ ಸಂಘಟನೆಗಳು ಧ್ವನಿ ಎತ್ತುವ ಮೊದಲೇ ನಮ್ಮ ಸಂಘ ಈ ವಿಚಾರವಾಗಿ ಹೋರಾಟ ಆರಂಭಿಸಿತು ಎಂದು ಹೇಳಿದರು. ಸಂಘಟನೆಯ ಅಧ್ಯಕ್ಷ ಶಾಂತಾರಾಮ ತೇಜ್, ಉಪಾಧ್ಯಕ್ಷರಾದ ಚಂದ್ರಕಾಂತ ತಳವಾರ, ದಯಾನಂದ, ಖಜಾಂಚಿ ವಿಜಯ, ಜಿಲ್ಲಾಧ್ಯಕ್ಷ ಜಿ.ಬಿ. ಶಿವಕುಮಾರ, ಎಚ್.ಜಿ.ಎಂ. ಬಸವರಾಜ, ನೇತ್ರಾವತಿ ಶಾನಭೋಗ್, ಎಂ. ರಮೇಶ, ಪ್ರಕಾಶ ನಾಯ್ಕ, ದೇವರಾಜು, ಸದಾಶಿವ ಕಂಬಾಳೆ, ಸಂತೋಷ, ಮಾದೇಶ ವರ್ಮಾ, ಎಲ್ಲ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು.