ಇಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ರೋಡ್ ಶೋ

GAYATRI-SIDDESHWARA_NEW.jpg
Published on

ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಶುಕ್ರವಾರ ಮುಖಂಡರು, ಕಾರ್ಯಕರ್ತರೊಂದಿಗೆ ರೋಡ್ ಶೋ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುವರು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ ಹೇಳಿದರು.
 ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಮಾಧುಸ್ವಾಮಿ, ಮುರುಗೇಶ ನಿರಾಣಿ, ಬೈರತಿ ಬಸವರಾಜ, ಶಾಸಕ ಜನಾರ್ದನ ರೆಡ್ಡಿ, ಬಳ್ಳಾರಿ ಸಂಸದ ದೇವೇಂದ್ರಪ್ಪ, ನಟಿ ಶೃತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
 ಬೆಳಗ್ಗೆ 9.30ಕ್ಕೆ ಮೂರು ಮಾರ್ಗಗಳಲ್ಲಿ ಪ್ರತ್ಯೇಕ ಮೆರವಣಿಗೆ ನಡೆಯಲಿದೆ. ನಗರ ದೇವತೆ ದುರ್ಗಾಂಬಿಕಾ ದೇವಾಲಯದಿಂದ ಒಂದು ತಂಡ, ನಗರ ದೇವತೆ ದುರ್ಗಾಂಬಿಕಾ ದೇವಾಲಯದಿಂದ ಎಸ್‌ಕೆಪಿ ರಸ್ತೆ, ಗಡಿಯಾರ ಕಂಬ, ಹಳೇ ಬಸ್ ನಿಲ್ದಾಣದ ಮಾರ್ಗವಾಗಿ ಗಾಂಧಿ ವೃತ್ತಕ್ಕೆ ಬಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಲಿದೆ.
 ಇನ್ನೊಂದು ತಂಡ ನಿಟುವಳ್ಳಿ ದುರ್ಗಾಂಬಿಕಾ ದೇವಾಲಯದಿಂದ ಎಚ್.ಕೆ.ಆರ್. ಸರ್ಕಲ್, ಜಯದೇವ ವೃತ್ತದ ಮೂಲಕ ಗಾಂಧಿ ವೃತ್ತಕ್ಕೆ ಬರಲಿದೆ. ಮೂರನೇ ತಂಡ ರಾಮ್ ಆ್ಯಂಡ್ ಕೋ ವೃತ್ತದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಾಗಲಿದೆ. ಮೂರೂ ಮೆರವಣಿಗೆ ಗಾಂಧಿ ವೃತ್ತದಲ್ಲಿ ಜತೆಯಾಗಲಿವೆ ಎಂದು ಮಾಹಿತಿ ನೀಡಿದರು.
 ಮುಖಂಡರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಕೊಳೇನಹಳ್ಳಿ ಸತೀಶ್, ಶ್ರೀನಿವಾಸ ದಾಸಕರಿಯಪ್ಪ, ಗೋವಿಂದರಾಜು, ಟಿಂಕರ್ ಮಂಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net